ಸಾಮಾಜಿಕ ಜಾಲತಾಣಗಳ ಪೈಕಿ ಹೆಚ್ಚು ಸದಸ್ಯರನ್ನು ಪಡೆದ `ಫೇಸ್‌ಬುಕ್`ನ ಮುಂದೆ ಇತರ ಹಲವು ತಾಣಗಳು ಸಪ್ಪೆ ಎನಿಸುತ್ತವೆ. `ಫೇಸ್‌ಬುಕ್`ನ ಜನಪ್ರಿಯತೆಯಿಂದಾಗಿ ಅನೇಕ ತಾಣಗಳು ತಮ್ಮ ಕಾರ್ಯ ನಿಲ್ಲಿಸಿದ್ದೂ ಉಂಟು. ಆದರೆ, ತನ್ನ ಸದಸ್ಯರು ಮಾಡುವ ವೃತ್ತಿ(ಉದ್ಯೋಗ)ಯನ್ನೇ ಗುರಿಯಾಗಿರಿಸಿಕೊಂಡು ಬೆಳೆಯುತ್ತಿರುವ ಇನ್ನೊಂದು ಪ್ರಮುಖ ಸಾಮಾಜಿಕ ತಾಣ `ಲಿಂಕಡ್‌ಇನ್` ಈಗ 200 ದೇಶಗಳ 13.50 ಕೋಟಿ ಸದಸ್ಯರನ್ನು ಪಡೆದು, ಅಚ್ಚರಿ ಮೂಡಿಸಿದೆ. ಇದಕ್ಕೆ ಪ್ರತಿಯಾಗಿ ವೃತ್ತಿಸಂಬಂಧಿ ವಿಷಯಗಳನ್ನು ತನ್ನೊಳಗೆ ಅಳವಡಿಸಿಕೊಳ್ಳಲು `ಫೇಸ್‌ಬುಕ್` ಸತತ ಪ್ರಯತ್ನ ನಡೆಸಿದೆ.
`ಫೇಸ್‌ಬುಕ್ ಬರೀ ಮೋಜಿಗಾಗಿ; ಲಿಂಕಡ್‌ಇನ್ ವೃತ್ತಿಪರ ಉದ್ದೇಶಕ್ಕಾಗಿ` ಎಂದು `ಲಿಂಕಡ್‌ಇನ್` ಪರೋಕ್ಷವಾಗಿ ಪ್ರತಿಪಾದಿಸುತ್ತದೆ. ಆದರೆ, ಇದು ಮುಂದಿನ ದಿನಗಳಲ್ಲಿ ಅನ್ವಯವಾಗದು ಎನ್ನುತ್ತಾರೆ, `ಬ್ರ್ಯಾಂಚ್‌ಔಟ್`ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಕ್ ಮರಿನಿ. ಅಂದ ಹಾಗೆ, `ಫೇಸ್‌ಬುಕ್`ಗೆ ಉದ್ಯೋಗಸಂಬಂಧಿ ಆಯಾಮಗಳ ಅಪ್ಲಿಕೇಶನ್ ಕೊಡುತ್ತಿರುವುದು `ಬ್ರ್ಯಾಂಚ್‌ಔಟ್`.
`ನಾನು ಪ್ರತಿ ಬಾರಿ ಲಿಂಕಡ್‌ಇನ್ ಸಂಪರ್ಕಿಸಿದಾಗಲೂ ನನ್ನ ಪರಿಚಯ ಕೇಳಲಾಗುತ್ತದೆ. ವಿಚಿತ್ರವೆಂದರೆ, ಇವರೆಲ್ಲ ಐದೇ ನಿಮಿಷಗಳ ಹಿಂದೆ ನನ್ನ ಜತೆ ಸಂವಹನ ನಡೆಸಿದವರು. ಪದೇ ಪದೇ ನನ್ನ ಪರಿಚಯ ಹೇಳಿಕೊಳ್ಳುವುದು ಮುಜುಗರದ ವಿಷಯ. ಫೇಸ್‌ಬುಕ್ ಸ್ನೇಹಿತರೇ ನನ್ನ ನಿಜವಾದ ಗೆಳೆಯರು` ಎನ್ನುತ್ತಾರೆ ರಿಕ್ ಮರಿನಿ.
ಬಳಕೆದಾರರು `ಬ್ರ್ಯಾಂಚ್‌ಔಟ್`ಗೆ ಸೇರ್ಪಡೆಯಾದಾಗ, ಅದರ ತಂತ್ರಾಂಶವು ಫೇಸ್‌ಬುಕ್‌ನಿಂದ ಅವರ ಶಿಕ್ಷಣ, ಪ್ರಸ್ತುತ ಉದ್ಯೋಗ, ವೃತ್ತಿ ಹಾಗೂ ಅವರ ಇತರ ಆಸಕ್ತಿಗಳನ್ನೂ ಪಡೆಯುತ್ತದೆ. ಈಗಿನ ಉದ್ಯೋಗ ತೊರೆಯಲು ಸದಸ್ಯ ಸಿದ್ಧನಾಗಿದ್ದರೆ ಅದರ ಮಾಹಿತಿಯನ್ನೂ ಸಂಗ್ರಹಿಸುತ್ತದೆ. ಇದೇ ಮಾದರಿಯಲ್ಲಿ ಅರ್ಹ ಉದ್ಯೋಗಿಯ ಹುಡುಕಾಟದಲ್ಲಿರುವ ಕಂಪೆನಿಯ ಅಧಿಕಾರಿಗಳಿಂದಲೂ ವಿವರ ಪಡೆಯುವ `ಬ್ರ್ಯಾಂಚ್‌ಔಟ್`, ಆಸಕ್ತರ ಬಯೋಡೇಟಾವನ್ನು ಅಧಿಕಾರಿಗಳಿಗೆ ರವಾನಿಸುತ್ತದೆ.
`ಲಿಂಕಡ್‌ಇನ್`ನಲ್ಲಿ ಈ ಎಲ್ಲ ಸಾಧ್ಯತೆಗಳು ಇಲ್ಲ. ಅಪರಿಚಿತರ ಶೈಕ್ಷಣಿಕ ಅರ್ಹತೆ, ಉದ್ಯೋಗದ ವಿವರಗಳನ್ನು ಬೇಕೆನಿಸಿದಾಗ ಪರಿಶೀಲಿಸಲು ಅಲ್ಲಿ ಸಾಧ್ಯವಿಲ್ಲ.
`ನನ್ನ ವೃತ್ತಿಪರ ಸಂಗತಿಗಳಿಗೆ ಸಂಬಂಧಿಸಿದಂತೆ ಕೆಲವರ ಜತೆ ನಾನು ವಿಚಾರವಿನಿಮಯ ನಡೆಸಲು ಬಯಸುವುದಿಲ್ಲ. ಆದರೆ ಅವರು ನನ್ನ ಒಳ್ಳೇ ಸ್ನೇಹಿತರು. ಅಷ್ಟಕ್ಕೆ ನನ್ನ ಗೆಳೆತನ ಸೀಮಿತ` ಎನ್ನುತ್ತಾರೆ, `ಬ್ರ್ಯಾಂಚ್‌ಔಟ್`ಗೆ ನೇರವಾಗಿ ಪೈಪೋಟಿ ನಡೆಸುತ್ತಿರುವ `ಬಿನೌನ್`ನ ಜಾಗತಿಕ ಮಾರುಕಟ್ಟೆ ಮ್ಯಾನೇಜರ್ ಟಾಮ್ ಶೆವಲರ್.`ಬ್ರ್ಯಾಂಚ್‌ಔಟ್`ಗಿಂತಲೂ ಹೆಚ್ಚಿನ ಮಾಹಿತಿಯನ್ನು ಫೇಸ್‌ಬುಕ್‌ನಿಂದ ಪಡೆಯುವ `ಬಿನೌನ್`, ತನ್ನ ಬಳಕೆದಾರರಿಗೆ ಆಯ್ಕೆಯ ಸ್ವಾತಂತ್ರ್ಯ ಕೊಡುತ್ತದೆ. ಅದರ ಅನುಸಾರ, ಬಳಕೆದಾರ ಒಪ್ಪಿದರೆ ಮಾತ್ರ ಗುಂಪಿನಲ್ಲಿ ಸೇರ್ಪಡೆಯಾಗುತ್ತಾನೆ.
ಉದ್ಯೋಗದ ಹುಡುಕಾಟದಲ್ಲಿ ಇರುವವರ ಮನೋಸ್ಥಿತಿ ಹೇಗಿರುತ್ತದೆ ಎಂದರೆ, ಒಳ್ಳೆಯ ಕೆಲಸ ಎಲ್ಲಿ ಸಿಗುತ್ತದೋ ಎಂದು ನೋಡುತ್ತಿರುತ್ತಾರೆ. ಇನ್ನೊಂದೆಡೆ ಮಾಲೀಕರ ಸ್ಥಿತಿ ಕೂಡ ಬೇರೆಯಲ್ಲ. ಬದ್ಧತೆ ಹೊಂದಿದ ಉದ್ಯೋಗಿ ಎಲ್ಲಿ ಸಿಗುತ್ತಾನೋ ಎಂದು ಕಾಯುತ್ತಿರುತ್ತಾರೆ. ಸಾಮಾನ್ಯವಾಗಿ ಸಾಮಾಜಿಕ ತಾಣಗಳಲ್ಲಿ ಸಾವಿರಾರು ಬಳಕೆದಾರರಿಂದ ಮಾಹಿತಿ ಶೋಧಿಸಿ, ಪರಿಶೀಲಿಸುವುದು ಸ್ವಲ್ಪ ಮಟ್ಟಿಗೆ ತೊಂದರೆಯ ಕೆಲಸ. `ಲಿಂಕಡ್‌ಇನ್` ಈ ಎರಡೂ ಸಾಧ್ಯತೆಗಳನ್ನು ಸುಲಭವಾಗಿಸುವುದು ವಿಶೇಷ.
ತನ್ನ ಬಳಕೆದಾರರ ಗುಂಪಿನಲ್ಲಿಯೇ ಮಾಹಿತಿಯನ್ನು ವಿನಿಮಯ ಮಾಡುವುದು `ಲಿಂಕಡ್‌ಇನ್`ನ ಏಕೈಕ ಬೃಹತ್ ವಹಿವಾಟು. ಇದರ ಸದಸ್ಯರನ್ನು `ಉದ್ಯೋಗಾರ್ಹತೆಯುಳ್ಳ ತಟಸ್ಥ` ಅಭ್ಯರ್ಥಿಗಳು ಎಂದೇ ಪರಿಗಣಿಸಲಾಗುತ್ತದೆ! ತಾವೀಗ ತಕ್ಕಮಟ್ಟಿಗೆ ಒಳ್ಳೆಯ ಕೆಲಸದಲ್ಲಿ ಇದ್ದು, ಉದ್ಯೋಗಕ್ಕಾಗಿ ತೀವ್ರ ಹುಡುಕಾಟದಲ್ಲೇನೂ ಇಲ್ಲ; ಆದರೆ ಸಾಮರ್ಥ್ಯಕ್ಕೆ ಸವಾಲೆಸೆಯುವ ಹೊಸ ಉದ್ಯೋಗ ಸಿಕ್ಕರೆ ಅದನ್ನು ಒಪ್ಪಿಕೊಳ್ಳುವ ತವಕದಲ್ಲಿ ಇರುವುದಾಗಿ ಸೂಚಿಸಲು `ಲಿಂಕಡ್‌ಇನ್`ಗೆ ಸೇರುತ್ತಾರೆ.
`ಲಿಂಕಡ್‌ಇನ್`ನ ಉಪಾಧ್ಯಕ್ಷ ಡೇವಿಡ್ ಹಾನ್ ಪ್ರಕಾರ, `ಸಹಾಯ ಬೇಕು` ಎಂಬ ಸಂದೇಶದೊಂದಿಗೆ ಬಳಕೆದಾರರು ನಮ್ಮ ತಾಣ ಸೇರುವುದಿಲ್ಲ. ಯಾರು- ಯಾರು ತಾಣದೊಳಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬುದನ್ನು ಸಹ ಗಮನಿಸುವುದಿಲ್ಲ. ತನ್ನ ಉದ್ಯೋಗದ ಸಾಮರ್ಥ್ಯ ಹೀಗಿದೆ ಎಂದು ತಿಳಿಸಲು ಅಥವಾ ತಮಗೆ ಇಂಥವರು ಬೇಕಾಗಿದ್ದಾರೆ ಎಂದು ಹೇಳಲು ನಮ್ಮ ತಾಣಕ್ಕೆ ಸೇರಿದವರ ಸಂಖ್ಯೆ 13.5 ಕೋಟಿಯಷ್ಟಾಗಿದೆ.2011ರ ನವೆಂಬರ್‌ಗೆ ಅಂತ್ಯಗೊಂಡ `ಕಾಮ್‌ಸ್ಕೋರ್`ನ ಸಮೀಕ್ಷೆಯ ಪ್ರಕಾರ, ಪ್ರತಿ ತಿಂಗಳೂ `ಲಿಂಕಡ್‌ಇನ್`ಗೆ ಭೇಟಿ ನೀಡುವವರ ಸಂಖ್ಯೆ 9.5 ಕೋಟಿ.
ಇದಕ್ಕೆ ಹೋಲಿಸಿದರೆ ಫೇಸ್‌ಬುಕ್‌ನ `ಬ್ರ್ಯಾಂಚ್‌ಔಟ್`ಗೆ ಭೇಟಿ ನೀಡುವವರ ಸಂಖ್ಯೆ ಪ್ರತಿ ತಿಂಗಳೂ 10 ಲಕ್ಷ. ಇನ್ನು `ಬಿನೌನ್`ನ ಸಾಮರ್ಥ್ಯ 1.7 ಲಕ್ಷ ಬಳಕೆದಾರರು ಮಾತ್ರ.
ಬಿಳಿಕಾಲರ್ ಉದ್ಯೋಗ ಅಥವಾ ಮ್ಯಾನೇಜ್‌ಮೆಂಟ್ ವಲಯದಲ್ಲಿ `ಲಿಂಕಡ್‌ಇನ್` ಸಾಕಷ್ಟು ಜನಪ್ರಿಯತೆ ಪಡೆದಿದೆ. ಆದರೆ, ಸಾಮಾನ್ಯ ಕಾರ್ಮಿಕರು, ತಾತ್ಕಾಲಿಕ ನೌಕರರು, ಕ್ಯಾಷಿಯರ್, ನಿರ್ಮಾಣ ಕಾರ್ಮಿಕರು ಹಾಗೂ ಸೇನೆಯ ನಿವೃತ್ತ ಸಿಬ್ಬಂದಿ ಈಗಲೂ ಬಳಸುವುದು `ಫೇಸ್‌ಬುಕ್` ಅನ್ನೇ ಎನ್ನುವುದು ಅವರ ವಾದ
No comments:
Post a Comment