Friday, January 20, 2012

ಬಾ ಮಗಳೆ...






ಪ್ರೀತಿಯ ಅಮ್ಮ...
ಹೋಗು ಮುದ್ದಿನ ಮಗಳೆ... ಹೋಗಿ ಬಾ
ಆ ನಿನ್ನ ಮನೆಯನ್ನು ಬೆಳಗಿ ಬಾ
.......
.......
ಧನದಾಹ ವ್ಯಾಮೋಹ ಅತಿಯಾಗಿ ಮಿತಿಮೀರಿ
ಬದುಕು ಹೊರೆಯಾದಾಗ ಹೊರಗೆ ಬಾ ಮಗಳೆ
.......
.......
ಹೊರೆಯಲ್ಲ ತವರಿಗೆ ನೀ ನಮ್ಮ ಮನೆಮಗಳು
ತೆರೆದಿಹುದು ನಿನಗೆಂದು ಈ ಮನೆಯ ಬಾಗಿಲು
ವಾಹ್ .... ಎಂಥಾ ಭಾವಪೂರ್ಣ ಲಹರಿ ಇದು. ಎಳೆಯ ಹೆಣ್ಣೊಬ್ಬಳು ಇಡೀ ಬದುಕನ್ನು ಜಯಿಸಿ ನಿಲ್ಲಲು ಬೇಕಾದಂತಹ ಶಕ್ತಿಯ ಸಿಂಚನ. ಮಗಳೊಬ್ಬಳು ಮನೆ ಮಗಳಾಗಿಯೇ ಉಳಿದು ಬಾಳಬೇಕೆನ್ನುವ ಹೃದಯದ ಮಿಡಿತ. ಎರಡನ್ನೂ ಎಷ್ಟು ಚೆನ್ನಾಗಿ ಪದಗಳಲ್ಲಿ ಹಿಡಿದಿಟ್ಟಿದ್ದೀಯಾ ಅಮ್ಮಾ!

ಹೆಣ್ಣು ಮಕ್ಕಳನ್ನು ಹಡೆದವರು ದಿನವಿಡೀ ಗುನುಗುನಿಸಬೇಕಾದ ಆಂತರ್ಯದ ಪಡಿನುಡಿಗಳಿವು. `ಹೋಗು ಮಗಳೆ` ಎಂಬ ಜಾಗವನ್ನು `ಬಾ ಮಗಳೆ` ಎಂಬ ಭಾವ ಆವರಿಸಿಕೊಂಡಾಗ, ನನ್ನಂತಹ ಹೆಣ್ಣು ಮಕ್ಕಳಿಗೆ ಅದೆಂತಹಾ ಭರವಸೆಯ ಸೂರ್ಯೋದಯ ಆದೀತು. `ಹೆಣ್ಣು ಪರರ ಸೊತ್ತು` ಎಂಬ ಸಾಮಾಜಿಕ ಸವಕಲು ಮಾದರಿಗೆ ಸೆಡ್ಡು ಹೊಡೆದು ನಿಲ್ಲಬಲ್ಲ ನಿನ್ನ ಈ ಅಭಿವ್ಯಕ್ತಿಗೆ ಸಾರ್ವಕಾಲಿಕ ಮನ್ನಣೆ ದೊರೆಯುವಂತಾದರೆ, ಮುಂದೆ ಯಾವ ಹೆಣ್ಣಿನ ಪಾಲಿಗೂ ಮದುವೆ ಒಂದು ಅಭದ್ರತೆಯಾಗಿಯಾಗಲಿ, ದುಃಸ್ವಪ್ನವಾಗಿಯಾಗಲಿ ಕಾಡುವ ಪ್ರಮೇಯವೇ ಬಾರದು.

ಆ ಮನೆಯೂ ನನ್ನದು, ಈ ಮನೆಯೂ ನನ್ನದು ಎಂಬ ಹೆಚ್ಚುವರಿ ಭದ್ರತೆಯು ಬದುಕಿನ ಸವಾಲಿನ ಎಲ್ಲ ಕಂದರಗಳನ್ನು ದಾಟಿ ನಿಲ್ಲುವ ಭರವಸೆಯನ್ನು ಆಕೆಗೆ ನೀಡಬಲ್ಲುದು.

`ಕೊಟ್ಟ ಹೆಣ್ಣು ಕುಲದಿಂದ ಹೊರಗೆ` ಎಂಬ ಚಿಂತನೆಯನ್ನು ಸವಕಲಾಗಿಸುವ ನಿನ್ನ ಪ್ರಯತ್ನಕ್ಕೆ ಮೊದಲ ವಿಮರ್ಶಕಿಯೂ ನಾನೇ, ಮೊದಲ ಹೆಗಲೆಣೆಯೂ ನಾನೇ. ನನ್ನ ಗೆಳತಿ ಟೀನೂ ಇದಕ್ಕೆ ಎಷ್ಟು ಚಂದದ ರಾಗ ಸಂಯೋಜಿಸಿದ್ದಾಳೆ ಗೊತ್ತಾ? `ಹೆಣ್ಣು ಮಗುವಿನ ದಿನ` ಕುರಿತ ಕಾಲೇಜಿನ ಸಮಾರಂಭದಲ್ಲಿ ಇದನ್ನು ನಾನು ಲೋಕಾಂತಗೊಳಿಸಲಿದ್ದೇನೆ. ಅಬ್ಬಬ್ಬಾ ....

ಮಗಳು ಎಷ್ಟು ಬೆಳೆದು ಬಿಟ್ಟಿದ್ದಾಳೆ ಎಂದು ಅಚ್ಚರಿಯಾಯಿತೇ? ನಾನು ಹೀಗೆ ಅರಳಿಕೊಂಡು ಬೆಳೆಯುವಂತಹ ಅವಕಾಶಗಳನ್ನು ನನಗೆ ನೀಡಿದವರು ನೀನು ಮತ್ತು ಅಪ್ಪನೇ ಅಲ್ವಾ?
ಹೆದರುಪುಕ್ಕಲಿಯರು?!

ನನಗಿನ್ನೂ ಚೆನ್ನಾಗಿ ನೆನಪಿದೆ. ಆ ದಿನ ಇಲಿಯೊಂದನ್ನು ಅಟ್ಟಿಸಿಕೊಂಡು ಹಾವೊಂದು ಮನೆಯೊಳಗೆ ಬಂದಾಗ ನಾನೂ, ಪುಟ್ಟನೂ, ಅಷ್ಟೇ ಏಕೆ ಅಪ್ಪನೂ ಎಷ್ಟೊಂದು ಹೆದರಿದ್ದರು! ನೀನು ಮಾತ್ರ ಕೋಲೊಂದರಿಂದ ಹಾವನ್ನೆತ್ತಿ ಮನೆಯಿಂದ ಹೊರಗೆ ದಾಟಿಸಿ, ಏನೂ ನಡೆದೇ ಇಲ್ಲ ಎಂಬಂತೆ ನಿರ್ಲಿಪ್ತಳಾಗಿ ಇದ್ದು ಬಿಟ್ಟಿದ್ದೆಯಲ್ಲಾ .....

ಅಪ್ಪನಿಗಿಲ್ಲದ ಧೈರ್ಯ ನಿನಗೆ ಹೇಗೆ ಬಂತಮ್ಮಾ ಎಂದು ನಾನೂ ಪುಟ್ಟನೂ ಅಚ್ಚರಿಯಿಂದ ಕೇಳಿದಾಗ, ಧೈರ್ಯವಂತಿಕೆ ಎನ್ನುವುದು ಹಿರಿಯರಿಂದ ಬರುವ ಬಳುವಳಿಯಲ್ಲ. ಅದು ಅವರವರೇ ಗಳಿಸಿಕೊಳ್ಳುವಂಥದ್ದು ಎಂದಿದ್ದೆ. ಧೈರ್ಯ ಎನ್ನುವುದು ಮನಸ್ಸಿಗೆ ಸಂಬಂಧಿಸಿದ ಸಂಗತಿ. ಒಂದು ಧೈರ್ಯದ ಮನಸ್ಥಿತಿ ರೂಪಿತವಾಗುವಲ್ಲಿ ಮಕ್ಕಳ ಬಾಲ್ಯವು ವಹಿಸುವ ಪಾತ್ರ

ದೊಡ್ಡದು ಎಂದು ಹೇಳಿ ನಿನ್ನ ಬಾಲ್ಯದ ಬದುಕು ನಿನಗೆ ಕಲಿಸಿದ ಪಾಠಗಳನ್ನು ಎಷ್ಟು ಸೊಗಸಾಗಿ ತೆರೆದಿಟ್ಟಿದ್ದೆ. ದಟ್ಟ ಕಾಡಿನ ನಡುವೆ ಹುಟ್ಟಿ ಬೆಳೆದದ್ದು. ಒಬ್ಬಳೇ ಕಾಡಿನಲ್ಲಿ ನಾಲ್ಕು ಮೈಲಿ ನಡೆದು ಶಾಲೆಗೆ ಹೋದದ್ದು, ಶಾಲೆಗೆ ಹೋಗುವಾಗಲೆಲ್ಲ ಅದೆಷ್ಟೋ ಸಾರಿ ಕಾಲು ಸವರಿಕೊಂಡೇ ಹರಿದು ಹೋದ ಭಯಂಕರ ಹಾವುಗಳು, ಚಿತ್ರವಿಚಿತ್ರವಾಗಿ ಕೂಗುವ ಹಕ್ಕಿಗಳು, ಆಗಾಗ ಮನೆಯ ಸಮೀಪವೇ ಕೇಳಿಬರುತ್ತಿದ್ದ ಹುಲಿಗಳ ಘರ್ಜನೆ, ಅಬ್ಬಬ್ಬಾ ಕೇಳುತ್ತಾ ಕೇಳುತ್ತಾ ನಾನೂ ಪುಟ್ಟನೂ ದಂಗಾಗಿಬಿಟ್ಟಿದ್ದೆವಲ್ಲಾ. ಪೇಟೆಯಲ್ಲಿ ಬೆಳೆದ ಅಪ್ಪನಿಗೆ, ಅಸಾಧಾರಣ ಧೈರ್ಯವನ್ನು ಬೇಡುವ ಸಾಹಸದ ಬದುಕಿನ ಪರಿಚಯ ಅಷ್ಟಾಗಿ ಆಗದೇ ಇರುವುದರಿಂದ ಅವರು ಬಲುಬೇಗನೇ ಹೌಹಾರಿ ಬಿಡುತ್ತಾರೆ ಎಂದು ನೀನು ಹೇಳಿದಾಗ ಅಪ್ಪನೂ ಅದನ್ನು ನಿರಾಕರಿಸಲಿಲ್ಲವಲ್ಲ.

ಹಾಗಾದರೆ ಹುಡುಗರು ಧೈರ್ಯವಂತರು, ಹುಡುಗಿಯರು ಹೆದರುಪುಕ್ಕಲರು ಎಂದೆಲ್ಲ ಹೇಳುವುದು ಪೂರ್ವಗ್ರಹವಲ್ಲವೇ? ಇಂತಹ ಸಿದ್ಧಮಾದರಿಗಳನ್ನು ನಿರಾಕರಿಸುವುದರ ಮೂಲಕ, ಹೆಣ್ಣು ಮಕ್ಕಳು ಘನತೆಯಿಂದ ಬೆಳೆದು ಬಂದರೆ ಎಂತಹಾ ಸಂದರ್ಭಗಳಲ್ಲೂ, ಬದುಕಿನ ನಾವೆಯನ್ನು ದಿಟ್ಟವಾಗಿ ದಡ ಸೇರಿಸಬಲ್ಲರು ಎಂಬುದು ನನಗೀಗ ಅರ್ಥವಾಗುತ್ತಿದೆ.

ಕಾಲೇಜಿನಲ್ಲಿ ನನ್ನನ್ನು ಎಲ್ಲರೂ ಮಹಾ ಸ್ತ್ರೀ ವಾದಿ ಅಂತ ಛೇಡಿಸುತ್ತಾರೆ. ನಾನು ಹೆಣ್ಣು ಮಕ್ಕಳ ಪರವೇ ಮಾತಾಡುವುದಕ್ಕೆ ನನಗೆ ಈ ಪಟ್ಟ ಕಟ್ಟಿದ್ದಾರೆ. ಹೀಗೆ ಆಲೋಚಿಸುವುದೇ ಸ್ತ್ರೀ ವಾದವಾ ಅಮ್ಮಾ? ಮೊನ್ನೆ ಏನಾಯಿತು ಗೊತ್ತಾ? ಡಿಬೇಟಿನಲ್ಲಿ ಕಾಲೇಜಿನ ಹುಡುಗರೆಲ್ಲ ಹೆಣ್ಣುಮಕ್ಕಳನ್ನು ಬೆಳೆಸುವುದಕ್ಕೆ ಖರ್ಚು ಹೆಚ್ಚು. ಆದರೆ ಗಂಡುಮಕ್ಕಳಿಗೆ ಖರ್ಚು ಕಡಿಮೆ, ಅದಕ್ಕೇ ಹೆಣ್ಣುಮಕ್ಕಳು ಕುಟುಂಬಕ್ಕೆ ಹೊರೆ ಎಂದೆಲ್ಲ ವಾದಿಸಿದರು.

ಸಾಲದೆಂಬಂತೆ ಖರ್ಚಿನ ಲೆಕ್ಕ ಪತ್ರವನ್ನೂ ಮುಂದಿಟ್ಟರು. ಅವರ ವಾದ ಸರಿಯಲ್ಲ. ಲೆಕ್ಕಾಚಾರದಲ್ಲಿ ಏನೋ ತಪ್ಪಿದೆ ಎಂದು ನನಗೆ ಅರ್ಥವಾಗಿತ್ತು. ಆದರೆ, ಅದು ಸುಳ್ಳು ಅಂತ ಸಾಧಿಸುವುದಕ್ಕೆ ನನ್ನ ಬಳಿ ಅಂಥದೇ ಲೆಕ್ಕಾಚಾರದ ಪಟ್ಟಿ ಇರಲಿಲ್ಲ. ಹಾಗಂತ ನಾನು ತೆಪ್ಪಗಿರಲಿಲ್ಲ. ಹೆಣ್ಣಿರಲಿ ಗಂಡಿರಲಿ, ಮಕ್ಕಳನ್ನು ಲೆಕ್ಕಾಚಾರದ ಸರಕುಗಳಾಗಿಸುವುದು ತಪ್ಪು. ಅವರಿಬ್ಬರೂ ಅಪ್ಪ ಅಮ್ಮನ ಪ್ರೀತಿಯ ಹೂಗಳಲ್ಲವೇ?

ಎಲ್ಲವನ್ನೂ ಹಣಕಾಸಿನ ದೃಷ್ಟಿಕೋನದಿಂದ ಅಳೆಯುವ ಒಂದು ಜೀವವಿರೋಧಿ ಪರಂಪರೆ ಆರಂಭವಾದಾಗ ಸಮಾಜದಲ್ಲಿ ಅವುಗಳ ಪ್ರತಿಫಲನಗಳು ಭಯಂಕರವಾಗಿರುತ್ತವೆ. ಎಲ್ಲಿ ಹೆಣ್ಣುಮಗು ನಷ್ಟ, ಖರ್ಚಿನ ಬಾಬ್ತು ಎಂಬ ನಕಾರಾತ್ಮಕ ಭಾವನೆ ನೆಲೆಯೂರಿರುತ್ತದೋ ಅಲ್ಲಿ ಆ ಹೊರೆಗಳಿಂದ, ನಷ್ಟಗಳಿಂದ ಪಾರಾಗುವ ಅಸಂಖ್ಯ ಉಪಾಯಗಳು ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹೆಣ್ಣು ಭ್ರೂಣಹತ್ಯೆಯಂತಹ ಸಾಮಾಜಿಕ ಅನಿಷ್ಟಕ್ಕೆ ಹಾದಿ ಸುಗಮವಾದದ್ದು ಇಂತಹ ಚಿಂತನೆಗಳಿಂದಲೇ ಎಂದು ನಾನೂ ತಟ್ಟನೆ ಪ್ರತಿಕ್ರಿಯಿಸಿದೆ. ಆದರೂ ನನಗೆ ಸಮಾಧಾನವಿಲ್ಲ.

ಅಂದು ಆ ಹುಡುಗರು ನಮ್ಮ ಮುಂದಿಟ್ಟ ಖರ್ಚಿನ ಪಟ್ಟಿಯ ಹಿಂದೆಯೇ ನನ್ನ ಮನಸ್ಸು ಓಡುತ್ತಿದೆ. ಹೆಣ್ಣುಮಕ್ಕಳನ್ನು ಬೆಳೆಸಲು ತಗಲುವ ವೆಚ್ಚದ ಬಗ್ಗೆ ಸಾಮಾನ್ಯ ತಿಳಿವಳಿಕೆಗಳು ಸತ್ಯದಿಂದ ದೂರ ಇರುವುದನ್ನು ಸಾಧಿಸಬೇಕಾದರೆ ಗಂಡುಮಕ್ಕಳ ಖರ್ಚಿನ ಪಟ್ಟಿಯನ್ನು ತಯಾರಿಸುವುದು ಅನಿವಾರ್ಯ.

ಅಮ್ಮಾ ಆ ಬಗ್ಗೆ ನೀನೂ ಹಿಂದೆಲ್ಲ ಹೇಳುತ್ತಿದ್ದುದು ನನಗೆ ನೆನಪಿದೆ. ಅಂತಹ ಒಂದು ಪಟ್ಟಿಯನ್ನು ತಯಾರಿಸಿ ಮೇಲ್ನೋಟಕ್ಕೆ ಕಾಣುವ ಸತ್ಯಕ್ಕಿಂತ ವಾಸ್ತವ ಬೇರೆಯೇ ಆಗಿದೆ ಎಂಬುದನ್ನು ಸಾಧಿಸಿ ತೋರಿಸುವುದಕ್ಕೆ ನನಗೆ ಯಾಕೆ ನೀನು ಸಹಾಯ ಮಾಡಬಾರದು?

ಇದು ಕೇವಲ ಲೆಕ್ಕಕ್ಕಾಗಿ ಲೆಕ್ಕ, ವಾದಕ್ಕಾಗಿ ವಾದ ಮಾತ್ರವೇ ವಿನಃ ಮಕ್ಕಳನ್ನು ತಕ್ಕಡಿಯಲ್ಲಿ ತೂಗಿ ಅಳೆದು ಪ್ರತ್ಯೇಕಿಸುವುದಕ್ಕಲ್ಲ. ಬದಲಿಗೆ ಹೆಣ್ಣುಮಗುವನ್ನು ಕುರಿತು ಸಮಾಜದಲ್ಲಿ ಬೇರೂರಿರುವ ಕಳವಳಕಾರಿ ಲೆಕ್ಕಾಚಾರವನ್ನು ಹುಸಿಯಾಗಿಸುವುದಕ್ಕೆ ಮಾತ್ರ, ಪಟ್ಟಿ ತಯಾರಿಸಿ ಕಳುಹಿಸುತ್ತೀಯಲ್ಲಾ?

ಸರಿ ಅಮ್ಮಾ .... ಇವತ್ತಿಗೆ ಇಷ್ಟು ಸಾಕು .... ನಾನು ಹಾಡು ಪ್ರಾಕ್ಟೀಸ್ ಮಾಡ್ಬೇಕು .... ಮುಗಿಸುವ ಮುನ್ನ ಇನ್ನೊಂದು ಮಾತು .... ಎಲ್ಲಾ ಹೆಣ್ಣು ಮಕ್ಕಳಿಗೂ ನನಗೆ ಸಿಕ್ಕಿರುವಂಥ ಅಮ್ಮ ಅಪ್ಪ ಸಿಕ್ಕರೆ ....

ಲಿಂಕಡ್‌ಇನ್'ಗೆ ಪರ್ಯಾಯ ಯತ್ನ ...?








ಸಾಮಾಜಿಕ ಜಾಲತಾಣಗಳ ಪೈಕಿ ಹೆಚ್ಚು ಸದಸ್ಯರನ್ನು ಪಡೆದ `ಫೇಸ್‌ಬುಕ್`ನ ಮುಂದೆ ಇತರ ಹಲವು ತಾಣಗಳು ಸಪ್ಪೆ ಎನಿಸುತ್ತವೆ. `ಫೇಸ್‌ಬುಕ್`ನ ಜನಪ್ರಿಯತೆಯಿಂದಾಗಿ ಅನೇಕ ತಾಣಗಳು ತಮ್ಮ ಕಾರ್ಯ ನಿಲ್ಲಿಸಿದ್ದೂ ಉಂಟು. ಆದರೆ, ತನ್ನ ಸದಸ್ಯರು ಮಾಡುವ ವೃತ್ತಿ(ಉದ್ಯೋಗ)ಯನ್ನೇ ಗುರಿಯಾಗಿರಿಸಿಕೊಂಡು ಬೆಳೆಯುತ್ತಿರುವ ಇನ್ನೊಂದು ಪ್ರಮುಖ ಸಾಮಾಜಿಕ ತಾಣ `ಲಿಂಕಡ್‌ಇನ್` ಈಗ 200 ದೇಶಗಳ 13.50 ಕೋಟಿ ಸದಸ್ಯರನ್ನು ಪಡೆದು, ಅಚ್ಚರಿ ಮೂಡಿಸಿದೆ. ಇದಕ್ಕೆ ಪ್ರತಿಯಾಗಿ ವೃತ್ತಿಸಂಬಂಧಿ ವಿಷಯಗಳನ್ನು ತನ್ನೊಳಗೆ ಅಳವಡಿಸಿಕೊಳ್ಳಲು `ಫೇಸ್‌ಬುಕ್` ಸತತ ಪ್ರಯತ್ನ ನಡೆಸಿದೆ.

`ಫೇಸ್‌ಬುಕ್ ಬರೀ ಮೋಜಿಗಾಗಿ; ಲಿಂಕಡ್‌ಇನ್ ವೃತ್ತಿಪರ ಉದ್ದೇಶಕ್ಕಾಗಿ` ಎಂದು `ಲಿಂಕಡ್‌ಇನ್` ಪರೋಕ್ಷವಾಗಿ ಪ್ರತಿಪಾದಿಸುತ್ತದೆ. ಆದರೆ, ಇದು ಮುಂದಿನ ದಿನಗಳಲ್ಲಿ ಅನ್ವಯವಾಗದು ಎನ್ನುತ್ತಾರೆ, `ಬ್ರ್ಯಾಂಚ್‌ಔಟ್`ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಕ್ ಮರಿನಿ. ಅಂದ ಹಾಗೆ, `ಫೇಸ್‌ಬುಕ್`ಗೆ ಉದ್ಯೋಗಸಂಬಂಧಿ ಆಯಾಮಗಳ ಅಪ್ಲಿಕೇಶನ್ ಕೊಡುತ್ತಿರುವುದು  `ಬ್ರ್ಯಾಂಚ್‌ಔಟ್`.

`ನಾನು ಪ್ರತಿ ಬಾರಿ ಲಿಂಕಡ್‌ಇನ್ ಸಂಪರ್ಕಿಸಿದಾಗಲೂ ನನ್ನ ಪರಿಚಯ ಕೇಳಲಾಗುತ್ತದೆ. ವಿಚಿತ್ರವೆಂದರೆ, ಇವರೆಲ್ಲ ಐದೇ ನಿಮಿಷಗಳ ಹಿಂದೆ ನನ್ನ ಜತೆ ಸಂವಹನ ನಡೆಸಿದವರು. ಪದೇ ಪದೇ ನನ್ನ ಪರಿಚಯ ಹೇಳಿಕೊಳ್ಳುವುದು ಮುಜುಗರದ ವಿಷಯ. ಫೇಸ್‌ಬುಕ್ ಸ್ನೇಹಿತರೇ ನನ್ನ ನಿಜವಾದ ಗೆಳೆಯರು` ಎನ್ನುತ್ತಾರೆ ರಿಕ್ ಮರಿನಿ.

ಬಳಕೆದಾರರು `ಬ್ರ್ಯಾಂಚ್‌ಔಟ್`ಗೆ ಸೇರ್ಪಡೆಯಾದಾಗ, ಅದರ ತಂತ್ರಾಂಶವು ಫೇಸ್‌ಬುಕ್‌ನಿಂದ ಅವರ ಶಿಕ್ಷಣ, ಪ್ರಸ್ತುತ ಉದ್ಯೋಗ, ವೃತ್ತಿ ಹಾಗೂ ಅವರ ಇತರ ಆಸಕ್ತಿಗಳನ್ನೂ ಪಡೆಯುತ್ತದೆ. ಈಗಿನ ಉದ್ಯೋಗ ತೊರೆಯಲು ಸದಸ್ಯ ಸಿದ್ಧನಾಗಿದ್ದರೆ ಅದರ ಮಾಹಿತಿಯನ್ನೂ ಸಂಗ್ರಹಿಸುತ್ತದೆ. ಇದೇ ಮಾದರಿಯಲ್ಲಿ ಅರ್ಹ ಉದ್ಯೋಗಿಯ ಹುಡುಕಾಟದಲ್ಲಿರುವ ಕಂಪೆನಿಯ ಅಧಿಕಾರಿಗಳಿಂದಲೂ ವಿವರ ಪಡೆಯುವ `ಬ್ರ್ಯಾಂಚ್‌ಔಟ್`, ಆಸಕ್ತರ ಬಯೋಡೇಟಾವನ್ನು ಅಧಿಕಾರಿಗಳಿಗೆ ರವಾನಿಸುತ್ತದೆ. 

`ಲಿಂಕಡ್‌ಇನ್`ನಲ್ಲಿ ಈ ಎಲ್ಲ ಸಾಧ್ಯತೆಗಳು ಇಲ್ಲ. ಅಪರಿಚಿತರ ಶೈಕ್ಷಣಿಕ ಅರ್ಹತೆ, ಉದ್ಯೋಗದ ವಿವರಗಳನ್ನು ಬೇಕೆನಿಸಿದಾಗ ಪರಿಶೀಲಿಸಲು ಅಲ್ಲಿ ಸಾಧ್ಯವಿಲ್ಲ.

`ನನ್ನ ವೃತ್ತಿಪರ ಸಂಗತಿಗಳಿಗೆ ಸಂಬಂಧಿಸಿದಂತೆ ಕೆಲವರ ಜತೆ ನಾನು ವಿಚಾರವಿನಿಮಯ ನಡೆಸಲು ಬಯಸುವುದಿಲ್ಲ. ಆದರೆ ಅವರು ನನ್ನ ಒಳ್ಳೇ ಸ್ನೇಹಿತರು. ಅಷ್ಟಕ್ಕೆ ನನ್ನ ಗೆಳೆತನ ಸೀಮಿತ` ಎನ್ನುತ್ತಾರೆ, `ಬ್ರ್ಯಾಂಚ್‌ಔಟ್`ಗೆ ನೇರವಾಗಿ ಪೈಪೋಟಿ ನಡೆಸುತ್ತಿರುವ `ಬಿನೌನ್`ನ ಜಾಗತಿಕ ಮಾರುಕಟ್ಟೆ ಮ್ಯಾನೇಜರ್ ಟಾಮ್ ಶೆವಲರ್.`ಬ್ರ್ಯಾಂಚ್‌ಔಟ್`ಗಿಂತಲೂ ಹೆಚ್ಚಿನ ಮಾಹಿತಿಯನ್ನು ಫೇಸ್‌ಬುಕ್‌ನಿಂದ ಪಡೆಯುವ `ಬಿನೌನ್`, ತನ್ನ ಬಳಕೆದಾರರಿಗೆ ಆಯ್ಕೆಯ ಸ್ವಾತಂತ್ರ್ಯ ಕೊಡುತ್ತದೆ. ಅದರ ಅನುಸಾರ, ಬಳಕೆದಾರ ಒಪ್ಪಿದರೆ ಮಾತ್ರ ಗುಂಪಿನಲ್ಲಿ ಸೇರ್ಪಡೆಯಾಗುತ್ತಾನೆ.

ಉದ್ಯೋಗದ ಹುಡುಕಾಟದಲ್ಲಿ ಇರುವವರ ಮನೋಸ್ಥಿತಿ ಹೇಗಿರುತ್ತದೆ ಎಂದರೆ, ಒಳ್ಳೆಯ ಕೆಲಸ ಎಲ್ಲಿ ಸಿಗುತ್ತದೋ ಎಂದು ನೋಡುತ್ತಿರುತ್ತಾರೆ. ಇನ್ನೊಂದೆಡೆ ಮಾಲೀಕರ ಸ್ಥಿತಿ ಕೂಡ ಬೇರೆಯಲ್ಲ. ಬದ್ಧತೆ ಹೊಂದಿದ ಉದ್ಯೋಗಿ ಎಲ್ಲಿ ಸಿಗುತ್ತಾನೋ ಎಂದು ಕಾಯುತ್ತಿರುತ್ತಾರೆ. ಸಾಮಾನ್ಯವಾಗಿ ಸಾಮಾಜಿಕ ತಾಣಗಳಲ್ಲಿ ಸಾವಿರಾರು ಬಳಕೆದಾರರಿಂದ ಮಾಹಿತಿ ಶೋಧಿಸಿ, ಪರಿಶೀಲಿಸುವುದು ಸ್ವಲ್ಪ ಮಟ್ಟಿಗೆ ತೊಂದರೆಯ ಕೆಲಸ. `ಲಿಂಕಡ್‌ಇನ್` ಈ ಎರಡೂ ಸಾಧ್ಯತೆಗಳನ್ನು ಸುಲಭವಾಗಿಸುವುದು ವಿಶೇಷ.

ತನ್ನ ಬಳಕೆದಾರರ ಗುಂಪಿನಲ್ಲಿಯೇ ಮಾಹಿತಿಯನ್ನು ವಿನಿಮಯ ಮಾಡುವುದು `ಲಿಂಕಡ್‌ಇನ್`ನ ಏಕೈಕ ಬೃಹತ್ ವಹಿವಾಟು. ಇದರ ಸದಸ್ಯರನ್ನು `ಉದ್ಯೋಗಾರ್ಹತೆಯುಳ್ಳ ತಟಸ್ಥ` ಅಭ್ಯರ್ಥಿಗಳು ಎಂದೇ ಪರಿಗಣಿಸಲಾಗುತ್ತದೆ! ತಾವೀಗ ತಕ್ಕಮಟ್ಟಿಗೆ ಒಳ್ಳೆಯ ಕೆಲಸದಲ್ಲಿ ಇದ್ದು, ಉದ್ಯೋಗಕ್ಕಾಗಿ ತೀವ್ರ ಹುಡುಕಾಟದಲ್ಲೇನೂ ಇಲ್ಲ; ಆದರೆ ಸಾಮರ್ಥ್ಯಕ್ಕೆ ಸವಾಲೆಸೆಯುವ ಹೊಸ ಉದ್ಯೋಗ ಸಿಕ್ಕರೆ ಅದನ್ನು ಒಪ್ಪಿಕೊಳ್ಳುವ ತವಕದಲ್ಲಿ ಇರುವುದಾಗಿ ಸೂಚಿಸಲು `ಲಿಂಕಡ್‌ಇನ್`ಗೆ ಸೇರುತ್ತಾರೆ.

`ಲಿಂಕಡ್‌ಇನ್`ನ ಉಪಾಧ್ಯಕ್ಷ ಡೇವಿಡ್ ಹಾನ್ ಪ್ರಕಾರ, `ಸಹಾಯ ಬೇಕು` ಎಂಬ ಸಂದೇಶದೊಂದಿಗೆ ಬಳಕೆದಾರರು ನಮ್ಮ ತಾಣ ಸೇರುವುದಿಲ್ಲ. ಯಾರು- ಯಾರು ತಾಣದೊಳಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬುದನ್ನು ಸಹ ಗಮನಿಸುವುದಿಲ್ಲ. ತನ್ನ ಉದ್ಯೋಗದ ಸಾಮರ್ಥ್ಯ ಹೀಗಿದೆ ಎಂದು ತಿಳಿಸಲು ಅಥವಾ ತಮಗೆ ಇಂಥವರು ಬೇಕಾಗಿದ್ದಾರೆ ಎಂದು ಹೇಳಲು ನಮ್ಮ ತಾಣಕ್ಕೆ ಸೇರಿದವರ ಸಂಖ್ಯೆ 13.5 ಕೋಟಿಯಷ್ಟಾಗಿದೆ.2011ರ ನವೆಂಬರ್‌ಗೆ ಅಂತ್ಯಗೊಂಡ `ಕಾಮ್‌ಸ್ಕೋರ್`ನ ಸಮೀಕ್ಷೆಯ ಪ್ರಕಾರ, ಪ್ರತಿ ತಿಂಗಳೂ `ಲಿಂಕಡ್‌ಇನ್`ಗೆ ಭೇಟಿ ನೀಡುವವರ ಸಂಖ್ಯೆ 9.5 ಕೋಟಿ. 

ಇದಕ್ಕೆ ಹೋಲಿಸಿದರೆ ಫೇಸ್‌ಬುಕ್‌ನ `ಬ್ರ್ಯಾಂಚ್‌ಔಟ್`ಗೆ ಭೇಟಿ ನೀಡುವವರ ಸಂಖ್ಯೆ ಪ್ರತಿ ತಿಂಗಳೂ 10 ಲಕ್ಷ. ಇನ್ನು `ಬಿನೌನ್`ನ ಸಾಮರ್ಥ್ಯ 1.7 ಲಕ್ಷ ಬಳಕೆದಾರರು ಮಾತ್ರ.
ಬಿಳಿಕಾಲರ್ ಉದ್ಯೋಗ ಅಥವಾ ಮ್ಯಾನೇಜ್‌ಮೆಂಟ್ ವಲಯದಲ್ಲಿ `ಲಿಂಕಡ್‌ಇನ್` ಸಾಕಷ್ಟು ಜನಪ್ರಿಯತೆ ಪಡೆದಿದೆ. ಆದರೆ, ಸಾಮಾನ್ಯ ಕಾರ್ಮಿಕರು, ತಾತ್ಕಾಲಿಕ ನೌಕರರು, ಕ್ಯಾಷಿಯರ್, ನಿರ್ಮಾಣ ಕಾರ್ಮಿಕರು ಹಾಗೂ ಸೇನೆಯ ನಿವೃತ್ತ ಸಿಬ್ಬಂದಿ ಈಗಲೂ ಬಳಸುವುದು `ಫೇಸ್‌ಬುಕ್` ಅನ್ನೇ ಎನ್ನುವುದು ಅವರ ವಾದ

ಮನಸ್ಸು ದುರ್ಬಲವಾಗುವುದೇಕೆ?



ಮನಸ್ಸಿದ್ದಲ್ಲಿ ಮಾರ್ಗ, ಕನಸಿದ್ದಲ್ಲಿ ಸಾಧನೆ  ಎಂಬ ಹಿತೋಕ್ತಿಯಾಗಲಿ,  ಮನಸ್ಸು ಮಾಡಿದ್ರೆ ಯಾಕಾಗಲ್ಲ? ಎಂತೆಂಥವರು ಏನೆಲ್ಲ ಮಾಡುತ್ತಾರೆ. ನಾವ್ಯಾಕೆ ಮಾಡಬಾರ‌್ದು  ಎಂಬ ಸದೃಢ ಮನಸ್ಸಿನ ನುಡಿಗಳನ್ನಾಗಲಿ ಜೀವನದಲ್ಲಿ ಒಂದು ಸಲವಾದರೂ ಕೇಳಿದ್ದೇವೆಯಲ್ಲವೇ?









ಕಂಕಣಬದ್ಧರಾಗಿ ಕೆಲವೊಮ್ಮೆ ಸಾಧನೆ ಮಾಡಿ ತೋರಿಸಿದ್ದೇವೆ. ಗಾಯದ ಮೇಲೆ ಬರೆ ಎಳೆದಂತೆ, ಕಷ್ಟಗಳ ಮೇಲೆ ಕಷ್ಟಗಳು ಎರಗಿ ಏನೂ ತೋಚದಂತಾಗಿ, ಇನ್ನು ಬದುಕೇ ಸಾಕು ಎನ್ನುವಷ್ಟರ ಮಟ್ಟಿಗೆ ಬಸವಳಿದಿದ್ದೇವೆ. ಜೀವನದಲ್ಲಿ ಜಿಗುಪ್ಸೆ ಹೊಂದಿ ಚಡಪಡಿಸಿದ್ದೇವೆ. 

ಆದರೇನಂತೆ ಡಿ.ವಿ.ಗುಂಡಪ್ಪ ಅವರು ಹೇಳಿದಂತೆ  `ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬಾ`  ಎನ್ನುವಂತೆ ಬದುಕು ಸಾಗಿಸುತ್ತಿದ್ದೇವೆ. ನಮ್ಮ ನಿತ್ಯ ಜೀವನದಲ್ಲಿ ಕೆಲವು ವಿಷಯಗಳು ನಮಗೆ ಕ್ಷುಲ್ಲಕ ಎನಿಸಿದರೂ ದುರ್ಬಲ ಮನಸ್ಸಿನವರನ್ನು ಹೇಳ-ಹೆಸರಿಲ್ಲದಂತೆ ಮಾಡುತ್ತವೆ ಎನ್ನಲು ಮುಂಬೈನಲ್ಲಿ ನಡೆದ ಎರಡು ಘಟನೆಗಳು ಸಾಕ್ಷಿ.

ಘಟನೆ 1: ಪಿಯುಸಿ ಹುಡುಗನೊಬ್ಬ ಟಿವಿಯ ರಿಮೋಟ್ ಕೊಡೆಂದು ಆಗತಾನೆ ಟಿವಿ ನೋಡಲಾರಂಭಿಸಿದ ತಂಗಿಯನ್ನು ಕಾಡಿದ. ಆಕೆ ಕೊಡಲಾರೆನೆಂದು ಹಠ ಹಿಡಿದಾಗ ಸಿಟ್ಟಿನಿಂದ ಅವಳ ಕಪಾಳಕ್ಕೆ ಹೊಡೆದ. ಅದೇ ಕೋಪ ಹತಾಶೆಯಲ್ಲಿ ಕೋಣೆಯೊಳಗೆ ಬಾಗಿಲು ಹಾಕಿ ಫ್ಯಾನ್‌ಗೆ ನೇಣು ಹಾಕಿಕೊಂಡ.

ಘಟನೆ 2: ಎಂಟನೇ ತರಗತಿ ಬಾಲೆಯೊಬ್ಬಳು ಕಳೆದ ಮಳೆಗಾಲದ ಆರಂಭದಲ್ಲಿ ಮುಂಬೈನಲ್ಲಿ ಮೊದಲ ಮಳೆಯ ಸಿಂಚನವಾದಾಗ ಆಟವಾಡಲು ಉತ್ಸುಕಳಾಗಿದ್ದಳು. ಹೆತ್ತವರು ಮನೆಯಲ್ಲಿರಲಿಲ್ಲ. ಹೊರಹೋಗದಂತೆ ಆಕೆಯ ಅಣ್ಣ ತಾಕೀತು ಮಾಡಿಬಿಟ್ಟ. ಹತಾಶೆಗೊಂಡ ಹುಡುಗಿ ತನ್ನ ದುಪ್ಪಟ್ಟದಿಂದ ನೇಣು ಹಾಕಿಕೊಂಡು ಸಾವನ್ನಪ್ಪಿದಳು.

ಇಂತಹ ಚಿಕ್ಕ ಪುಟ್ಟ ವಿಷಯಗಳಿಗಾಗಿ ಅನಾಹುತಗಳಾದ ಘಟನೆ ಹೆಕ್ಕಿದರೆ ಲೆಕ್ಕವಿಲ್ಲದಷ್ಟು ಸಿಗುತ್ತವೆ. ಇಂಥ ಅನಾಹುತಗಳಿಗೆ ಮುಖ್ಯ ಕಾರಣವೇ ದುರ್ಬಲ ಮನಸ್ಸು.

ಮನಸ್ಸು ದುರ್ಬಲವಾಗುವ ಸಂದರ್ಭಗಳು
* ಅತ್ಯಂತ ಪ್ರೀತಿಯ ವಸ್ತು ಕಳೆದುಹೋದಾಗ
* ನಮ್ಮ ನಾಲಿಗೆಯನ್ನು ನಾವೇ ಹರಿಯಬಿಟ್ಟಾಗ
* ನಮ್ಮನ್ನು ಪ್ರೀತಿಸುವವರು ಬೇರೊಬ್ಬರನ್ನು ಪ್ರೀತಿಸಲಾರಂಭಿಸಿದಾಗ
* ಸಹಿಸಿಕೊಳ್ಳಲಾರದಂತಹ ಅವಮಾನವಾದಾಗ
* ಪ್ರೀತಿಪಾತ್ರರಾದವರನ್ನು ಕಳೆದುಕೊಂಡಾಗ
* ಮಾನಸಿಕ ಯಾತನೆ, ಕಿರುಕುಳವಾದಾಗ
* ಯಾರಾದರೂ ನಮ್ಮ ಸ್ವತಂತ್ರಕ್ಕೆ ಅಡ್ಡಿಪಡಿಸಿದಾಗ
* ದೇಹಕ್ಕೆ (ರೋಗಗಳಿಂದ) ತೊಂದರೆಯಾದಾಗ
* ಕಲಿಯಬೇಕಾದದ್ದನ್ನು ಬೇಗನೆ ಕಲಿಯಲಾಗದಿದ್ದಾಗ
* ಸಾಧನೆಯ ಹಾದಿಯಲ್ಲಿ ಯಶ ಕಾಣದಿದ್ದಾಗ
* ಪ್ರೀತಿಸುವ ವ್ಯಕ್ತಿ ಕೈಕೊಟ್ಟಾಗ
* ಜನರು ಅನುಕಂಪ ತೋರ್ಪಡಿಸಿದಾಗ
*  ಭಯವಾದಾಗ, ಜಗಳವಾದಾಗ
* ಮೌನದಲ್ಲಿಯೇ ಚುಚ್ಚು ಮಾತುಗಳಿಂದ ನೋಯಿಸಿದಾಗ
*  ನಾವು ಮಾಡಿದ ತಪ್ಪಿನ ಅರಿವು ನಮಗುಂಟಾದಾಗ
ಇಂಥ ನಾನಾ ಸಂದರ್ಭಗಳಲ್ಲಿ ಮನಸ್ಸು ದುರ್ಬಲವಾಗುವುದಿದೆ.

ದುರ್ಬಲ ಮನಸ್ಸನ್ನು ಗುರುತಿಸುವುದೊಂದು ಕೌಶಲ
ನಾನಾ ಘಟನೆಗಳ ಹೊಡೆತಕ್ಕೆ ಸಿಲುಕಿಕೊಂಡ ಮನಸ್ಸು ದುರ್ಬಲಗೊಳ್ಳುತ್ತಿದ್ದಂತೆ ಚಂಚಲತೆ ಹೆಚ್ಚಾಗುತ್ತದೆ. ಏನೂ ತೋಚದಂತಾಗುತ್ತದೆ. ಈಗ  ನಾನು ಏನು ಮಾಡಲಿ  ಎಂಬ ಪ್ರಶ್ನೆ ಕಾಡಲಾರಂಭಿಸುತ್ತದೆ.  ನಕಾರಾತ್ಮಕ(ನೆಗೆಟಿವ್) ಭಾವನೆಗಳು ಜಾಗೃತವಾಗುತ್ತವೆ. ಅಂಜಿಕೆ, ಅಧೈರ್ಯ, ದುರ್ಬಲತೆ, ಏಕಾಂಗಿತನಗಳು ಮಿತ್ರರಾಗಲು ಬಯಸುತ್ತವೆ.

ಧೈರ್ಯ, ನಂಬಿಕೆ, ವಿಶ್ವಾಸಗಳು ಹಿತಶತ್ರುಗಳಾಗಿ ಪರಿಣಮಿಸುತ್ತವೆ. ನಾನಾ ಮಾರ್ಗಗಳು, ನಾನಾ ತೀರ್ಮಾನಗಳು ಮನದಲ್ಲಿ ಕೋಲಾಹಲವೆಬ್ಬಿಸಿ ಒಮ್ಮೆಲೇ ಬಂದೆರಗುವುದರಿಂದ ಉತ್ತರ ಕಂಡುಕೊಳ್ಳಲು ವಿಫಲರಾಗುತ್ತೇವೆ. ಈ ಭೂಮಿ ಮೇಲೆ ಇನ್ನು ಬದುಕು ಸಾಕು ಎಂಬ ಆತುರದ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇಂತಹ ನಿರ್ಧಾರಗಳಿಗೆ ಕಾರಣವೇ ದುರ್ಬಲ ಮನಸ್ಸು.

ಬೇಕು ಎಚ್ಚರ!
ಸಮಸ್ಯೆಗಳಿಂದ ಮನಸ್ಸು ದುರ್ಬಲವಾಯಿತು. ದುರ್ಬಲಗೊಂಡ ಮನಸ್ಸಿನಲ್ಲಿ ಯಾವ ಬದಲಾವಣೆಗಳಾಗುತ್ತವೆ ಎಂಬುದನ್ನು ಗುರುತಿಸಿಯಾಯಿತು ಎಂದ ಮೇಲೆ, ನಮ್ಮ ಮುಂದಿನ ಗುರುತರ ಜವಾಬ್ದಾರಿ ಮಂಗನ ಕೈಗೆ ಮಾಣಿಕ್ಯ ಕೊಡದಿರುವುದು ಅಂದರೆ ದುರ್ಬಲ ಮನಸ್ಸಿಗೆ ಶರಣಾಗದಿರುವುದು.

ವರ್ತನೆ ಪರಿವರ್ತನೆಗೊಳಿಸಿ
* ಮನಸ್ಸು ದುರ್ಬಲಗೊಂಡಾಗ ಏಕಾಂಗಿತನ ಒಳ್ಳೆಯದಲ್ಲ. ಬೇಗನೆ ಜನರ ಗುಂಪಿನೊಳಗೊಬ್ಬರಾಗಲು ಪ್ರಯತ್ನಿಸಬೇಕು.
* ಮನಸ್ಸು ದುರ್ಬಲವಾದ ಸ್ಥಳವನ್ನು ಜಾಣ್ಮೆಯಿಂದ ತ್ಯಜಿಸಬೇಕು.
* ಗೆಳೆಯ/ತಿಯರನ್ನು ಕರೆದುಕೊಂಡು ಸಿನಿಮಾ ಅಥವಾ ಇತರೆ ಮನರಂಜನೆ ಕಾರ್ಯಕ್ರಮ ನೋಡಲು ಹೋಗಬೇಕು.
* ಮನಸ್ಸನ್ನು ಕಾರ್ಯಗಳತ್ತ ಹರಿಸಿ. (ಗಿಡಗಳಿಗೆ ನೀರು ಹಾಯಿಸಿ. ಪೇಪರ್ ಕಟಿಂಗ್ ಮಾಡಿ)
* ಕೈಯನ್ನು ಹಣೆಗೋ, ಗದ್ದಕ್ಕೋ ಹಚ್ಚಿಕೊಂಡು ಕೂರಬಾರದು.
* ಲೊಚಗುಟ್ಟುವುದನ್ನು ನಿಲ್ಲಿಸಿ. ಮೂಗಿನಿಂದ ದೀರ್ಘ ಉಸಿರೆಳೆದುಕೊಂಡು ಬಾಯಿಂಧ ಬಿಡುವುದು ಉತ್ತಮ.
* ಒಂದೆಡೆ ಹೋಗಿ, ಕೈಯ ಬೆರಳುಗಳು ಒಂದಕ್ಕೊಂದು ಕೂಡುವಂತೆ ಜೋರಾಗಿ ಚಪ್ಪಾಳೆ ತಟ್ಟುತ್ತಾ, ನರಮಂಡಲಗಳನ್ನು ಎಚ್ಚರಗೊಳಿಸುವುದು.
* ಆದ ಕಷ್ಟ-ನಷ್ಟಗಳನ್ನು ಆಪ್ತರ ಮುಂದೆ ವಿವರಿಸಿ. ಮನಸ್ಸು ಹಗುರ ಮಾಡಿಕೊಳ್ಳುವುದು.
* ವ್ಯಕ್ತಿತ್ವ ವಿಕಸನ ಪುಸ್ತಕಗಳು ಅಥವಾ ತಮ್ಮ ಮನೆಯ ಫೋಟೋ ಆಲ್ಬಮ್‌ಗಳನ್ನು  ಒಮ್ಮೆ ತಿರುವಿ ಹಾಕಿ.

 ನಾನು ಹೋದ ಮೇಲಾದರೂ ಅವರು ಎಚ್ಚರವಾಗಲಿ  ಎಂಬ ನೆಗೆಟಿವ್ ಯೋಚನೆ ಬಿಟ್ಟು  ನಾನು ಅವರೊಂದಿಗೆ ಇದ್ದು ಅವರನ್ನು ಪ್ರೀತಿಯಿಂದ ಬದಲಾಯಿಸುತ್ತೇನೆ  ಎಂಬ ಪಾಸಿಟಿವ್ ಯೋಚನೆ ಮಾಡುವುದು.

ಸ್ವಾಮಿ ವಿವೇಕಾನಂದರ  ಹೇಳಿಕೆಯಂತೆ  ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ.  ಖಂಡಿತ ನಿಜ. ಮನಸ್ಸು ಸದೃಢಗೊಳ್ಳುತ್ತಾ ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ, ನಮಗೆ ಹಿತ-ಮಿತ ಆಹಾರ, ಕೆಲಸಕ್ಕೆ ತಕ್ಕ ವಿಶ್ರಾಂತಿ, ಯೋಗ, ಪ್ರಾಣಾಯಾಮ ಧ್ಯಾನದ ಅನುಭೂತಿಗಳು ಅವಶ್ಯ.

ಸುಂದರ ಯೋಚನೆಗಳಿರಲಿ....

ಸ್ವಸ್ಥ ಬದುಕು 



ನಿಸರ್ಗ ಸೌಂದರ್ಯ ತುಂಬಿದ ಸುಂದರವಾದ ಪಟ್ಟಣದಲ್ಲಿ ಗಟ್ಟು ಎಂಬ ನಾಯಿಯೊಂದು ವಾಸಿಸುತ್ತಿತ್ತು. ಪ್ರತಿಯೊಬ್ಬರಿಗೂ ಗಟ್ಟುವಿನ ಪರಿಚಯವಿತ್ತು. ಆತ ಇಡೀ ದಿನ ಬಾಲ ಅಲ್ಲಾಡಿಸುತ್ತ, ಜನರನ್ನು ಕಂಡಕೂಡಲೇ ಬೊಗಳುತ್ತಿದ್ದ.

ಸಂಗೀತಗಾರ್ತಿಯೊಬ್ಬಳು ಗೀತೆಯೊಂದನ್ನು ಗುನಗುನಿಸುತ್ತಾ ಬೊಗಳುವ ಗಟ್ಟುವಿನತ್ತ ನೋಡಿ ಹೇಳಿದಳು, “ಗಟ್ಟು ನಾನು ನಡೆದುಹೋಗುತ್ತಿರುವಾಗ ನೀನು ಹಾಡಬಾರದೇಕೆ? ನೀನು ತುಂಬ ಸುಂದರವಾಗಿ ಹಾಡುತ್ತೀಯಾ ಅದು ನಿನಗೆ ಗೊತ್ತೆ”ಎಂದು ಕೇಳಿದಳು.

ಮಾರನೇ ದಿನ ದಪ್ಪ ದೇಹದ ಹೆಂಗಸೊಬ್ಬಳು ರಸ್ತೆಯಲ್ಲಿ ನಡೆದುಹೋಗುತ್ತಿದ್ದಳು. ಆಕೆ ಸಹ ಬೊಗಳುತ್ತಿದ್ದ ಗಟ್ಟುವಿನತ್ತ ನೋಡಿ, “ಗಟ್ಟು ಯಾವಾಗಲೂ ಹಸಿದಿರುತ್ತೀಯಾ? ಇಡೀ ದಿನ ಜನರತ್ತ ಮುಖ ಮಾಡಿ ಬೊಗಳುವ ಬದಲು ನೀನು ಜಾಗಿಂಗ್‌ಗೆ ಯಾಕೆ ಹೋಗಬಾರದು” ಎಂದು ಪ್ರಶ್ನಿಸಿದಳು.

ಮತ್ತೊಂದು ದಿನ ತತ್ವಶಾಸ್ತ್ರದ ಪ್ರಾಧ್ಯಾಪಕಿಯೊಬ್ಬಳು, “ಗಟ್ಟು ಎಷ್ಟೊಂದು ಪ್ರಶ್ನೆಗಳನ್ನು ಕೇಳುತ್ತಿದ್ದೀಯಾ? ಈ ದಿನ ನೀನೆ ಏಕೆ ಉತ್ತರಿಸಬಾರದು?” ಎಂದು ಹೇಳಿದಳು.
ಈ ಮಧ್ಯೆ ಗಟ್ಟು ಬೊಗಳುತ್ತಲೇ ಇತ್ತು.

ನಾವೆಲ್ಲ ನಮ್ಮ ಯೋಚನೆ, ಚಿಂತನೆಗಳ ಕನ್ನಡಕ ಧರಿಸಿ ಜಗತ್ತನ್ನು ನೋಡುತ್ತೇವೆ. ನಮಗೆ ಜಗತ್ತು ಕೆಟ್ಟದಾಗಿ ಮತ್ತು ಅಪಾಯಕಾರಿಯಾಗಿ ಕಾಣುತ್ತಿದ್ದರೆ ಅದಕ್ಕೆ ನಮ್ಮ ಯೋಚನೆ ಕಾರಣ. `ಈ ಕಾಲ ಸರಿಯಿಲ್ಲ ಮತ್ತು ಅಪಾಯಕಾರಿ` ಎಂದು ನಾವು ಚಿಂತೆ ಮಾಡುತ್ತೇವೆ. ನಿಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಿ, ಜಗತ್ತು ಹೇಗೆ ಬದಲಾದಂತೆ ಕಾಣುತ್ತದೆ ನೋಡಿ.

ಜಗತ್ತು ಸುಂದರ ಮತ್ತು ಇಲ್ಲಿ ಪ್ರೀತಿ ತುಂಬಿದೆ ಅಂದುಕೊಂಡರೆ ಅದನ್ನು ನಾವು ಸೌಂದರ್ಯ ಮತ್ತು ಪ್ರೀತಿ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದೇವೆ ಎಂದು ಅರ್ಥ. ನಮ್ಮ ಸುತ್ತಲಿನ ಜಗತ್ತನ್ನು ಸುಂದರಗೊಳಿಸಿಕೊಳ್ಳುವಲ್ಲಿ ನಮ್ಮ ಕೊಡುಗೆ ಕಿಂಚಿತ್ ಆದರೂ ಇರುತ್ತದೆ. ಆಲೋಚನೆಗಳನ್ನು ಬದಲಿಸಿ ಪ್ರೀತಿಯ ಕಂಪನಾಂಕಗಳನ್ನು ಹೆಚ್ಚಿಸಿಕೊಳ್ಳಿ.

ಇತ್ತೀಚೆಗೆ ಮಹಿಳೆಯೊಬ್ಬಳು ಹಲ್ಲು ಕೀಳಿಸಿಕೊಳ್ಳಲು ದಂತವೈದ್ಯರ ಬಳಿ ಹೋಗಬೇಕಿತ್ತು. ಆಸ್ಪತ್ರೆಗೆ ತೆರಳುವಾಗ ಕ್ಯಾಬ್‌ನಲ್ಲಿ ಕುಳಿತ ಅವಳು, `ಈ ವೈದ್ಯರು ಒಳ್ಳೆಯ ವ್ಯಕ್ತಿ, ನನಗೆ ನೋವು ಮಾಡುವುದಿಲ್ಲ, ಎಲ್ಲವೂ ಸರಿಯಾಗುತ್ತದೆ` ಎಂದು ಹೇಳಿಕೊಳ್ಳುತ್ತಲೇ ಹೋದಳು. ಹಲ್ಲು ಕೀಳುವಾಗ ಆಕೆಗೆ ಸ್ವಲ್ಪವೂ ನೋವಾಗಲಿಲ್ಲ.
 
`ನಿಮಗೆ ಈಗ ಹೇಗನಿಸುತ್ತಿದೆ` ಎಂದು ದಂತವೈದ್ಯರು ಕಳಕಳಿಯಿಂದ ಆಕೆಯನ್ನು ಪ್ರಶ್ನಿಸಿದರು. ಆಕೆ ಮನೆಗೆ ತೆರಳುವ ಸಮಯ ಬಂದಾಗ, ಕ್ಯಾಬ್ ತರಿಸಲು ತಮ್ಮ ಕಾಂಪೌಂಡರ್‌ನನ್ನು ಕಳುಹಿಸಿದರು.

ಆಕೆ ಕ್ಯಾಬ್‌ನಲ್ಲಿ ಕುಳಿತಾದ ಮೇಲೆ ಕಾಂಪೌಂಡರ್ ಚಾಲಕನಿಗೆ ಹೇಳಿದ, ` ಇದು ಆಕೆಯ ವಿಳಾಸ. ನಿಧಾನವಾಗಿ ವಾಹನ ನಡೆಸಿ. ಆಕೆ, ಈಗಷ್ಟೇ ಹಲ್ಲು ಕೀಳಿಸಿಕೊಂಡಿದ್ದಾರೆ.` ಕ್ಯಾಬ್ ಚಾಲಕ ಸಹ ನಿಧಾನವಾಗಿ ವಾಹನ ನಡೆಸಿದ.

ಆ ಮಹಿಳೆ ನನ್ನ ಬಳಿ, `ಈ ಜಗತ್ತು ಎಷ್ಟು ಸುಂದರವಾಗಿದೆ` ಎಂದು ಹೇಳುತ್ತಾಳೆ. ನಾವು ಸುಂದರ ವಿಚಾರ, ಒಳ್ಳೆಯ ಆಲೋಚನೆ ಹೊಂದುವವರೆಗೆ ಈ ಜಗತ್ತು ಸುಂದರವಾಗಿಯೇ ಇರುತ್ತದೆ.
ಹೊಸ ವರ್ಷವನ್ನು ಸುಂದರವಾಗಿ, ವಿಶ್ವಾಸಯುತವಾಗಿ ಆರಂಭಿಸಲು ಇಲ್ಲಿದೆ ಮಾರ್ಗ.
ಹದಿಹರೆಯದ ಹುಡುಗಿಯೊಬ್ಬಳು ಕುಟುಂಬ ಸ್ನೇಹಿತರ ಮನೆಗೆ ಭೇಟಿ ನೀಡಿದ್ದಳು.
 
ಆ ಮನೆಯ ಹುಡುಗನೊಬ್ಬ ಶಾಲೆಯಲ್ಲಿ ಆಕೆಗೆ ಸೀನಿಯರ್ ಆಗಿದ್ದ. ಆತನನ್ನು ಆ ಹುಡುಗಿ ದೇವರಂತೆ ಕಾಣುತ್ತಿದ್ದಳು. ಭಾನುವಾರ ಆತ ಆ ಹುಡುಗಿ ಮತ್ತು ಆಕೆಯ ತಂಗಿಯನ್ನು ಲಾಂಗ್ ಡ್ರೈವ್‌ಗೆ ಕರೆದೊಯ್ದ. ಹಳೆಯ ಕಟ್ಟಡಗಳು, ಗ್ಯಾರೇಜ್, ಹಳೆಯ ಕಾರ್‌ಗಳ ಶೆಡ್, ಕೊಳಚೆ ನೀರು ಹರಿಯುವ ಪ್ರದೇಶದಲ್ಲಿ ಆತ ಕಾರ್ ಓಡಿಸಿಕೊಂಡು ಹೋದ. ಆದರೂ, ಈ ಹುಡುಗಿ ಖುಷಿಯಿಂದ ಕುಣಿಯುತ್ತಿದ್ದಳು. ತಾನು ಆರಾಧಿಸುವ ಹುಡುಗನ ಜತೆ ಇದ್ದೇನೆ ಎಂಬುದೇ ಆಕೆಯ ಸಂತಸಕ್ಕೆ ಕಾರಣವಾಗಿತ್ತು.

ನಿಮ್ಮ ಐಡಲ್ ಯಾರು? ಸಿನಿಮಾ ಸ್ಟಾರ್ ? ಕ್ರೀಡಾ ಪಟು? ಅಧ್ಯಾತ್ಮಿಕ ಗುರು ಅಥವಾ ದೇವರು? ಒಂದು ವಾರ ಕಾಲ ಆ ವ್ಯಕ್ತಿಯ ಜತೆ ಇದ್ದಂತೆ ಕಲ್ಪಿಸಿಕೊಳ್ಳಿ. ನೀವು ಆರಾಧಿಸುವ ಆ ವ್ಯಕ್ತಿ ನಿಮ್ಮ ಜೊತೆಗೆ ಇರುತ್ತಾರೆ. ನೀವು ಎಲ್ಲಿ ಹೋದರೂ ಅಲ್ಲಿ ಬರುತ್ತಾರೆ. ಆ ಸಮಯದಲ್ಲಿ ಮನಸ್ಸು ಮಂಕಾಗಿಸುವ ಆಲೋಚನೆಗಳು ಹುಟ್ಟಿದರೂ ಅದನ್ನು ಸಂತಸಕರ ಯೋಚನೆಯಾಗಿ ಬದಲಿಸಿಕೊಳ್ಳುತ್ತೀರಿ.

ಹೌದು, ನಿಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ನೀವು ಆರಾಧಿಸುವ ಆ ವ್ಯಕ್ತಿಗೆ ಕೆಟ್ಟ ಮಾತು ಹೇಳಬೇಕು ಅಂದರೂ ಅದನ್ನು ಅಲ್ಲಿಯೇ ಹತ್ತಿಕ್ಕಿಕೊಳ್ಳುತ್ತೀರಿ. ಅದು ಹಾಗೆಯೇ ಇರಬೇಕು. ಯಾವಾಗಲೂ, ಎಂಥ ಸನ್ನಿವೇಶದಲ್ಲೂ ಸುಂದರವಾದುದ್ದನ್ನೇ ಹುಡುಕಿ. ನಾನು ಅದನ್ನು ಪ್ರೀತಿಸುತ್ತೇನೆ ಎಂದು ಪದೇಪದೇ ಹೇಳಿಕೊಳ್ಳಿ. ನೀವು ಎಲ್ಲಿಯೇ ಹೋಗಲಿ ಬೆಳಕು ಬೀರುವ ವ್ಯಕ್ತಿಯಾಗಿ.

`ಬೀಜದೊಳಗೆ ಎಣ್ಣೆ ಇದ್ದಂತೆ, ಕಿಡಿಯಲ್ಲಿ ಬೆಂಕಿ ಇದ್ದಂತೆ ನಿಮ್ಮ ಗುರು ನಿಮ್ಮಳಗೆ ಇರುತ್ತಾನೆ. ನೀವು ಎಚ್ಚೆತ್ತುಕೊಳ್ಳಬೇಕು` ಎನ್ನುತ್ತಾರೆ ಸಂತ ಕಬೀರ.

ನಿಮ್ಮಳಗಿನ ಬೆಳಕನ್ನು ಹೊತ್ತಿಸಿಕೊಳ್ಳಿ. ಸ್ವಿಚ್ ಹಾಕಿದಾಗ ಕತ್ತಲ ಕೋಣೆಯಲ್ಲಿ ಬೆಳಕು ತುಂಬುವಂತೆ, ಅರಿವಿನ ಬೆಳಕು ನಿಮ್ಮಳಗೆ ಆವರಿಸಲಿ.

ಅದು ಹೇಗೆ? ನಿಮ್ಮ ಬದುಕನ್ನು ಪ್ರೀತಿಸಿ, ನಗುತ್ತ, ಆರೋಗ್ಯವಂತರಾಗಿ ಇರಿ. ನಮ್ಮ ಸುತ್ತಲೂ ವಿಶ್ವದ ಸುಂದರ ಕಂಪನಗಳು ಇರುತ್ತವೆ. ನಾವು ಅದನ್ನು ಹೀರಿಕೊಳ್ಳಬೇಕು ಅಷ್ಟೇ.
ಎಲ್ಲರನ್ನೂ ಮನಃಪೂರ್ವಕವಾಗಿ ಹೊಗಳಿ. ಹಾಗೆಯೇ ಹೊಗಳಿಕೆಯನ್ನು ಸ್ವೀಕರಿಸಿ. ಹೊಗಳಿಕೆ ಅಂದರೆ `ಐ ಲವ್ ಯೂ` ಎನ್ನುವ ಮತ್ತೊಂದು ವಿಧಾನ ಅಷ್ಟೇ.

ನಿಮ್ಮನ್ನು ನೀವೇ ಹೊಗಳಿಕೊಳ್ಳಿ ಹಾಗೂ ಸ್ವೀಕರಿಸಿ. ಇದು ಆತ್ಮರತಿಯಲ್ಲ. ನೀವು ಬೇರೆಯವರನ್ನು ಹೊಗಳಿದಷ್ಟು ಜಗತ್ತಿನ ಶಕ್ತಿಯನ್ನು ಹೆಚ್ಚಿಸುವಲ್ಲಿ, ಈ ಗ್ರಹವನ್ನು ಉನ್ನತ ಮಟ್ಟಕ್ಕೇರಿಸುವಲ್ಲಿ ಕೊಡುಗೆ ನೀಡುತ್ತ ಇರುತ್ತೀರಿ. ಹಾಗಾಗಿ ನೀವು ಪ್ರೀತಿಸುವ ವ್ಯಕ್ತಿಗಳ ಪಟ್ಟಿಯಲ್ಲಿ ನಿಮ್ಮ ಹೆಸರೂ ಇರಬೇಕು.

ನಿಮ್ಮ ಮತ್ತು ನಿಮ್ಮ ಸುತ್ತಲಿನ ಜಗತ್ತಿನಲ್ಲಿ ಸೌಂದರ್ಯ ತುಂಬಿತುಳುಕುವುದನ್ನು ನೀವು ನೋಡುತ್ತೀರಿ. 2012ರೊಳಗೆ ಕಾಲಿರಿಸಲು ಎಂಥ ಉನ್ನತ ಹಾಗೂ ದೈವಿಕ ಮಾರ್ಗ ಇದಲ್ಲವೇ?





ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು....


ಸ್ವಾಮಿ ವಿವೇಕಾನಂದರು ಒಬ್ಬ `ದಡ್ಡ` ವಿದ್ಯಾರ್ಥಿಯಾಗಿದ್ದರು. `ವಿದ್ಯಾರ್ಥಿಗಳಿಗೆ ಬೋಧಿಸಲು ಬರುವುದಿಲ್ಲ` ಎಂಬ ಕಾರಣಕ್ಕೆ ಶಿಕ್ಷಕನ ಉದ್ಯೋಗ ಕಳೆದುಕೊಂಡಿದ್ದರು.

ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ಬಗೆಯ ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು.

ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. ಜತೆಗೆ ದೇಶ-ವಿದೇಶದ ಮಾಂಸಾಹಾರಿ ಅಡುಗೆಯನ್ನು ಮಾಡುವ ಪಾಕಪ್ರಾವೀಣ್ಯತೆ ಹೊಂದಿದ್ದರು. ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರ ಮನೆಯಲ್ಲಿ ಭೇದ ಇಲ್ಲದೆ ಊಟ ಮಾಡುತ್ತಿದ್ದರು.

ಸನ್ಯಾಸಿಯಾಗಿದ್ದುಕೊಂಡೇ ಅವರು ಅಮೆರಿಕದ ಪ್ರಖ್ಯಾತ ಹೋಟೆಲ್‌ಗಳಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೆ ನಡೆಯುವ ಔತಣಕೂಟಗಳಲ್ಲಿ ಭಾಗವಹಿಸುತ್ತಿದ್ದರು....ಹೀಗೆ ಹೇಳುತ್ತಾ ಹೋದರೆ ಸ್ವಾಮಿ ವಿವೇಕಾನಂದರನ್ನು `ಹಿಂದೂ ಧರ್ಮದ ವೀರ ಸನ್ಯಾಸಿ` ಎಂದು ಕೊಂಡಾಡುತ್ತಾ ಅವರ 150ನೇ ಜಯಂತಿ ಆಚರಣೆಯ ಸಂಭ್ರಮದಲ್ಲಿ ಮುಳುಗಿರುವವರಿಗೆ ಆಘಾತವಾದೀತು! ಆದರೆ ಇದು ಸತ್ಯ.

ಒಬ್ಬ ಶೂದ್ರನಾಗಿ ಹಿಂದೂ ಧರ್ಮದ ಪರಂಪರೆಗೆ ವಿರುದ್ಧವಾಗಿ ಸನ್ಯಾಸಿ ದೀಕ್ಷೆ ಪಡೆದ ವಿವೇಕಾನಂದರು, ಅದೇ ಪರಂಪರೆಯನ್ನು ಧಿಕ್ಕರಿಸಿ ಸಮುದ್ರ ಲಂಘನ ಮಾಡಿದ್ದರು.

ಸನಾತನಿಗಳು ದ್ವೇಷಿಸುತ್ತಿದ್ದ `ಮ್ಲೇಚ್ಛರ` ಮನೆಗಳಲ್ಲಿಯೇ ಉಳಿದು ಉಂಡು ದಿನ ಕಳೆದಿದ್ದರು. ಇದಕ್ಕಾಗಿಯೇ ಚಿಕಾಗೋ ಧರ್ಮ ಸಮ್ಮೇಳನಕ್ಕೆ ಹೋಗಿ ಹಿಂದಿರುಗಿದ ಅವರನ್ನು ಸ್ವಾಗತಿಸಲು ರಚಿಸಿದ ಸಮಿತಿಗೆ ಅಧ್ಯಕ್ಷರಾಗಲು ಹೈಕೋರ್ಟ್ ನ್ಯಾಯಮೂರ್ತಿ ಗುರುದಾಸ್ ಮುಖರ್ಜಿ ನಿರಾಕರಿಸಿದ್ದರು.

ಸನ್ಯಾಸಿಯಾದ ನಂತರವೂ ಬಹಳಷ್ಟು ಮೇಲ್ಜಾತಿ ಗಣ್ಯರು ಅವರನ್ನು `ಸೋದರ`ನೆಂದು ಕರೆಯುತ್ತಿದ್ದರೇ ಹೊರತು `ಸ್ವಾಮಿ` ಎನ್ನುತ್ತಿರಲಿಲ್ಲ. ಹಿಂದೂ ಧರ್ಮದ ಜಾತೀಯತೆ, ಅಸ್ಪೃಶ್ಯತೆ, ಅಂಧ ಸಂಪ್ರದಾಯಗಳು, ದೇವಾಲಯಗಳಲ್ಲಿ ನಡೆಯುತ್ತಿರುವ ಡಾಂಭಿಕತನ, ಮತಾಂತರದ ಬಗ್ಗೆ ಅವರು ಬರೆದುದನ್ನು ಓದಿದರೆ ಅವರೊಬ್ಬ ಹಿಂದು ವಿರೋಧಿ ಎಂದು ಹಿಂದುತ್ವದ ಉಗ್ರ ಪ್ರತಿಪಾದಕರು ಸುಲಭದಲ್ಲಿ ಆರೋಪಿಸಬಹುದು.

`ತಲೆ ಮೇಲು, ಕಾಲು ಕೀಳು` ಎಂದೆಲ್ಲ ಮನುಷ್ಯನ ಅಂಗಾಂಗಳಲ್ಲಿಯೇ ತಾರತಮ್ಯ ಕಾಣುತ್ತಿದ್ದ ಹಿಂದುಗಳ ನಡವಳಿಕೆಯಿಂದ ರೋಸಿಹೋಗಿದ್ದ ಅವರು, ಮನುಷ್ಯನಿಗೆ `ಮುಸ್ಲಿಂ ದೇಹ ಮತ್ತು ವೇದಾಂತದ ಮೆದುಳು` ಇರಬೇಕೆಂದು ಹೇಳುತ್ತಿದ್ದರು.
ಮುಸ್ಲಿಂ ಮನೆಯಲ್ಲಿ ಊಟಮಾಡಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಅವರ ಅಭಿಮಾನಿ ಖೇತ್ರಿಯ ಮಹಾರಾಜನಿಗೆ ವಿವೇಕಾನಂದರು `ನಾನು ಭಂಗಿಗಳ ಜತೆ ಕೂತು ಕೂಡಾ ಊಟಮಾಡಬಲ್ಲೆ. ನಿಮ್ಮಂತಹವರ ಬಗ್ಗೆ ನಾನು ಹೆದರಲಾರೆ. ನಿಮಗೆ ದೇವರು ಇಲ್ಲವೇ ಧರ್ಮದ ಬಗ್ಗೆ ಗೊತ್ತಿಲ್ಲ` ಎಂದು ತಿರುಗೇಟು ನೀಡಿದ್ದರು.
`ಜೀಸಸ್ ಬದುಕಿದ್ದ ದಿನಗಳಲ್ಲಿ ನಾನೇನಾದರೂ ಪ್ಯಾಲೆಸ್ತೀನ್‌ನಲ್ಲಿದ್ದಿದ್ದರೆ ಕಣ್ಣಿರಿನಿಂದಲ್ಲ, ನನ್ನ ಹೃದಯದಿಂದ ರಕ್ತಬಸಿದು ಆತನ ಪಾದ ತೊಳೆಯುತ್ತಿದ್ದೆ..` ಎಂದು ಭಾವುಕರಾಗಿ ಅವರು ಬರೆದುಕೊಂಡಿದ್ದಾರೆ.

ಹಿಂದೂಗಳು ಮುಸ್ಲಿಂ ದೊರೆಗಳ ಪ್ರಭಾವ ಮತ್ತು ಬಲವಂತದಿಂದಾಗಿ ಮತಾಂತರಗೊಂಡರು ಎನ್ನುವುದನ್ನು ಅವರು ಒಪ್ಪುತ್ತಿರಲಿಲ್ಲ.
ಹಿಂದೂ ಧರ್ಮದ ಒಳಗಿನ ಜಾತೀಯತೆ, ಅಸ್ಪೃಶ್ಯತೆ, ಶೋಷಣೆ ಇದಕ್ಕೆ ಕಾರಣ. ಮೂಲಭೂತವಾದ ಮಾನವಹಕ್ಕುಗಳು ಮತ್ತು ವ್ಯಕ್ತಿ ಘನತೆಯನ್ನು ಗೌರವಿಸದೆ ಇರುವ ಧರ್ಮ ಅಲ್ಲವೇ ಅಲ್ಲ, ಅದು `ಪ್ರೇತ ನೃತ್ಯ`, ಅದು ನಡೆಯುವ ಸ್ಥಳ ನರಕ` ಎಂದು ಹೇಳಿದ್ದರು.
`ಧರ್ಮ-ಧರ್ಮಗಳ ನಡುವೆ ಸಹನೆಯಷ್ಟೇ ಇದ್ದರಷ್ಟೇ ಸಲ್ಲದು, ಅವುಗಳನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕು, ಗುರು ರಾಮಕೃಷ್ಣ ಪರಮಹಂಸರಿಂದ ನಾನು ಇದನ್ನೇ ಕಲಿತದ್ದು` ಎಂದು ಅವರು ಬರೆದಿದ್ದಾರೆ.

ವಿವೇಕಾನಂದರ ಬಗ್ಗೆ ನಮ್ಮಲ್ಲಿ ಇನ್ನಷ್ಟು ಗೌರವ-ಅಭಿಮಾನ ಹುಟ್ಟಿಸುವ ಈ `ಮನುಷ್ಯ ಮುಖ`ವನ್ನು ಅವರ 150ನೇ ಜಯಂತಿ ಆಚರಣೆಯಲ್ಲಿ ಬಿಂಬಿಸಲಾಗುತ್ತಿರುವ `ಉತ್ಸವಮೂರ್ತಿ`ಯಲ್ಲಿ ಕಾಣಲು ಹೋದರೆ ನಿರಾಶೆಯಾಗುತ್ತದೆ.
ಕೇವಲ 39 ವರ್ಷ, ಐದು ತಿಂಗಳು ಮತ್ತು 24 ದಿನ ಬದುಕಿದ್ದ ಮತ್ತು 24ರ ಹರಯದಲ್ಲಿಯೇ ಸನ್ಯಾಸ ಸ್ವೀಕರಿಸಿದ್ದ ವಿವೇಕಾನಂದರನ್ನು ಅವರ ಸಾವಿನ 110 ವರ್ಷಗಳ ನಂತರವೂ ನಮಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲವೇನೋ ಎಂದು ಅನಿಸತೊಡಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ವಿವೇಕಾನಂದರನ್ನು ಹಿಂದೂ ಧರ್ಮದ `ಬ್ರಾಂಡ್ ಅಂಬಾಸಿಡರ್` ಆಗಿ ಬಿಂಬಿಸುವ ಭರದಲ್ಲಿ ಅವರ ಮೇಲೆ ಇಲ್ಲಸಲ್ಲದ ಗುಣ-ವಿಶೇಷ, ಶಕ್ತಿ -ಸಾಮರ್ಥ್ಯಗಳನ್ನು ಆರೋಪಿಸಿ ದೇವರ ಪಟ್ಟಕ್ಕೆ ಏರಿಸಲಾಗುತ್ತಿದೆ.

ಇದೇನು ಹೊಸದಲ್ಲ. ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜವನ್ನು ಸುಧಾರಿಸಲು ಹೊರಟವರನ್ನೆಲ್ಲ ನಾವು `ದೇವರು` ಮಾಡಿ ನಮ್ಮ ಕೈಗೆ ಎಟುಕದಷ್ಟು ದೂರದಲ್ಲಿರಿಸಿದ್ದೇವೆ.
 ದೇವರ ಅವತಾರವಾಗದೆ ಕೇವಲ ಮನುಷ್ಯನಾಗಿ ಹುಟ್ಟಿ ಅಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯ ಇಲ್ಲ ಎಂಬ ನಂಬಿಕೆಯನ್ನು ನಮ್ಮ ಅನೇಕ ಧಾರ್ಮಿಕ ನಾಯಕರು ಮತ್ತು ಧಾರ್ಮಿಕ ನಾಯಕರ ಸೋಗಿನ ರಾಜಕಾರಣಿಗಳು ಬಿತ್ತುತ್ತಾ, ಬೆಳೆಸುತ್ತಾ ಸಾಗಿದ್ದಾರೆ.
ಬುದ್ಧ-ಬಸವನಿಂದ ಹಿಡಿದು ವಿವೇಕಾನಂದ-ನಾರಾಯಣ ಗುರುಗಳವರೆಗೆ ಎಲ್ಲರನ್ನೂ ಅವರವರ ಭಕ್ತ ಸಮೂಹ ದೇವರುಗಳಾಗಿ ಮಾಡಿ ಪೂಜೆ-ಭಜನೆಗಳಲ್ಲಿ ಮುಳುಗಿಸಿ ಬಿಟ್ಟಿದ್ದಾರೆ. ಈ ಆರಾಧನೆಯ ಭರದಲ್ಲಿ ಆ ಮಹನೀಯರ ನಿಜವಾದ ಬದುಕು ಮತ್ತು ಚಿಂತನೆಯ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಎಲ್ಲೋ ಹೂತುಹೋಗಿರುತ್ತವೆ.

 ಪ್ರಖ್ಯಾತ ಬಂಗಾಳಿ ಸಾಹಿತಿ ಮಣಿ ಸಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್` ಎನ್ನುವ ಪುಸ್ತಕವನ್ನು ಕಳೆದ ವರ್ಷ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದೆ. ಇದು ಎಂಟು ವರ್ಷಗಳ ಹಿಂದೆ  ಪ್ರಕಟವಾದ ಸಂಶೋಧನೆ ಆಧಾರಿತ ಬಂಗಾಳಿ ಭಾಷೆಯ ಪುಸ್ತಕದ ಇಂಗ್ಲಿಷ್ ಅನುವಾದ (ಸಂಕರ್ ಅವರ `ಸೀಮಾಬದ್ದ` ಮತ್ತು `ಜನ ಅರಣ್ಯ` ಕಾದಂಬರಿಗಳನ್ನು ಸತ್ಯಜಿತ್ ರೇ ಚಲನಚಿತ್ರ ಮಾಡಿದ್ದರು).
ವಿವೇಕಾನಂದರ ತತ್ವ-ಸಿದ್ಧಾಂತಗಳ ಜತೆ ಅವರ ಖಾಸಗಿ ಬದುಕಿನ ಅಪರಿಚಿತ ಮುಖವನ್ನು ಸಂಕರ್ ಅವರ ಪುಸ್ತಕ, ತಮ್ಮಂದಿರಾದ ಮಹೇಂದ್ರನಾಥ ದತ್ತಾ ಮತ್ತು ಡಾ. ಭೂಪೇಂದ್ರನಾಥ ದತ್ತಾ ಅವರು ಅಣ್ಣನ ಬಗ್ಗೆ ಬರೆದ ಪುಸ್ತಕಗಳು ಹಾಗೂ ಸೋದರಿ ನಿವೇದಿತಾ ಅವರ ಲೇಖನಗಳು  ತೆರೆದಿಡುತ್ತದೆ.

ಮುಂದೊಂದು ದಿನ ವಿದೇಶಿ ನೆಲದಲ್ಲಿ ನಿಂತು ತನ್ನಲ್ಲಿರುವ ಜ್ಞಾನ ಮತ್ತು ಇಂಗ್ಲಿಷ್ ಭಾಷಾ ಪಾಂಡಿತ್ಯದಿಂದ ಅಲ್ಲಿನ ಇಂಗ್ಲಿಷ್ ಭಾಷಿಕರ ಮಂತ್ರಮುಗ್ಧಗೊಳಿಸಿದ್ದ ವಿವೇಕಾನಂದರು ಇಂಟರ್‌ಮಿಡಿಯೇಟ್ ಮತ್ತು ಬಿಎ ಪದವಿಯ ಇಂಗ್ಲಿಷ್ ಪರೀಕ್ಷೆಗಳಲ್ಲಿ ಗಳಿಸಿದ್ದ ಅಂಕ ಕ್ರಮವಾಗಿ ಶೇಕಡಾ 46 ಮತ್ತು ಶೇಕಡಾ 56.  ಬಿಎ ಪರೀಕ್ಷೆಯ  ಒಟ್ಟು 500 ಅಂಕಗಳಲ್ಲಿ ಗಳಿಸಿದ್ದು ಕೇವಲ 261. (ಸಂಸ್ಕೃತದಲ್ಲಿ 43 ಮತ್ತು ತತ್ವಶಾಸ್ತ್ರದಲ್ಲಿ 45).
ತಂದೆಯ ಸಾವಿನ ನಂತರ ಅನಿವಾರ‌್ಯವಾಗಿ ಉದ್ಯೋಗ ಮಾಡಬೇಕಾಗಿ ಬಂದ ವಿವೇಕಾನಂದರು ಮೊದಲು ಕೆಲಸಕ್ಕೆ ಸೇರಿದ್ದು ಈಶ್ವರಚಂದ್ರ ವಿದ್ಯಾಸಾಗರ ಅವರು ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ. ಅಲ್ಲಿ ಇವರನ್ನು ಮಕ್ಕಳಿಗೆ ಪಾಠ ಹೇಳಲು ಬರುವುದಿಲ್ಲ ಎನ್ನುವ ಕಾರಣ ನೀಡಿ ಸ್ವತಃ ಈಶ್ವರಚಂದ್ರರೇ ಕೆಲಸದಿಂದ ವಜಾಗೊಳಿಸಿದ್ದರು.

ಭುವನೇಶ್ವರಿ ದೇವಿ ಎಂಬ ತಾಯಿ ಇಲ್ಲದೆ ಹೋಗಿದ್ದರೆ ಜಗತ್ತಿಗೆ ವಿವೇಕಾನಂದರು ಸಿಗುತ್ತಿರಲಿಲ್ಲವೇನೋ? ಕೋಲ್ಕತ್ತಾದ ಸಾವಿರಾರು ನರೇಂದ್ರನಾಥರಲ್ಲಿ ಒಬ್ಬರಾಗಿ ಅವರು ಹುಟ್ಟಿ ಸಾಯುತ್ತಿದ್ದರು.
ವಿವೇಕಾನಂದರು ಮೂಲತಃ ಶ್ರಿಮಂತ ಕುಟುಂಬಕ್ಕೆ ಸೇರಿದವರಾಗಿದ್ದರೂ ತಂದೆಯ ಅಕಾಲಮೃತ್ಯುವಿನ ನಂತರ ಆಸ್ತಿಯನ್ನೆಲ್ಲ ದಾಯಾದಿಗಳು ಕಬಳಿಸಿದ ಕಾರಣ ಇಡೀ ಕುಟುಂಬ ಬೀದಿ ಪಾಲಾಗುತ್ತದೆ. ಹನ್ನೊಂದು ಮಕ್ಕಳಲ್ಲಿ ಇವರೇ ದೊಡ್ಡ ಗಂಡುಮಗನಾದ ಕಾರಣ ಸಂಸಾರ ನಿರ್ವಹಣೆ ನರೇಂದ್ರನಾಥನ ಪುಟ್ಟ ಹೆಗಲಮೇಲೆ ಬೀಳುತ್ತದೆ.

ನಿರುದ್ಯೋಗಿಯಾಗಿ ಹರಕಲು ಅಂಗಿ-ಪೈಜಾಮ ಹಾಕಿ ಬೀದಿ ಸುತ್ತುತ್ತಿದ್ದ ಅವರು ಎಷ್ಟೋ ಬಾರಿ ಉಪವಾಸ ಇರುತ್ತಿದ್ದರಂತೆ. ಕುಟುಂಬದ ಆಸ್ತಿಗಾಗಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಹೋರಾಟ ಸತತ ಹದಿನೇಳು ವರ್ಷ ನಡೆದು ವಿವೇಕಾನಂದರ ಸಾವಿನ ಹಿಂದಿನ ತಿಂಗಳಷ್ಟೇ ಇತ್ಯರ್ಥವಾಗಿತ್ತು.

ಕುಟುಂಬದ ಕಷ್ಟಗಳನ್ನು ತಾಯಿಯ ಹೆಗಲ ಮೇಲೆ ಹಾಕಿ ವಿವೇಕಾನಂದರು ಸಂಸಾರ ತೊರೆದು ಸನ್ಯಾಸಿಯಾಗುತ್ತಾರೆ. ಕಷ್ಟ ಕಾಲದಲ್ಲಿ ಕೈಬಿಟ್ಟು ಹೋದ ಎಂದು ಮಗನನ್ನು ತಾಯಿ ಭುವನೇಶ್ವರಿದೇವಿ ದ್ವೇಷಿಸಲಿಲ್ಲ, `ನನ್ನ ಮಗ 24ನೇ ವರ್ಷಕ್ಕೆ ಸನ್ಯಾಸಿಯಾದ` ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಇದ್ದರು.
ಮಗ ಸತ್ತನಂತರ ಎಂಟು ವರ್ಷ ಬದುಕಿದ್ದ ತಾಯಿ ಖೇತ್ರಿ ಮಹಾರಾಜ ಕೊಡುತ್ತಿದ್ದ ಮಾಸಿಕ ನೂರು ರೂಪಾಯಿಯಲ್ಲಿ ಕಡು ಕಷ್ಟದಲ್ಲಿಯೇ ಜೀವನ ಸಾಗಿಸಿದ್ದರು.
ಈಗ ವಿವೇಕಾನಂದರನ್ನು ತಲೆಮೇಲಿಟ್ಟು ಮೆರೆದಾಡಲಾಗುತ್ತಿದ್ದರೂ ಬದುಕಿದ್ದಾಗ  ಭಾರತೀಯರು ಅವರಿಗೆ ಹೆಚ್ಚು ನೆರವಾಗಿರಲಿಲ್ಲ. `ಪ್ರತಿ ಬಾರಿ ವಿದೇಶಿಯರಲ್ಲಿಯೇ ಭಿಕ್ಷೆ ಕೇಳಲೇನು` ಎಂದು ಅವರೊಮ್ಮೆ ಬೇಸರದಿಂದ ಪ್ರಶ್ನಿಸಿದ್ದರು.

`ವಿಶಾಲವಾದ ಎದೆ, ಬಲಿಷ್ಠವಾದ ತೋಳುಗಳು, ಕಾಂತಿಯುತ ಕಣ್ಣುಗಳು...` ಎಂದೆಲ್ಲ ವಿವೇಕಾನಂದರನ್ನು ಹಿಂದೂ ಧರ್ಮದ `ಹೀ ಮ್ಯಾನ್` ಎಂಬಂತೆ ಬಣ್ಣಿಸುವವರಿಗೆ ಅವರು ಹುಟ್ಟುರೋಗಿಯಾಗಿದ್ದರೆಂದು ಗೊತ್ತಿದೆಯೋ ಇಲ್ಲವೋ? ತೀವ್ರ ತಲೆನೋವಿನಿಂದ ಹಿಡಿದು ಹೃದಯದ ಕಾಯಿಲೆವರೆಗೆ ಅವರಿಗೆ 31 ಬಗೆಯ ರೋಗಗಳಿದ್ದವು.
ಮೂತ್ರಕೋಶ, ಲಿವರ್, ಗಂಟಲು ಸಂಬಂಧಿ ರೋಗಗಳಲ್ಲದೆ ರಕ್ತದೊತ್ತಡ, ಮಧುಮೇಹ, ಆಸ್ತಮಾ, ಅಜೀರ್ಣ, ಮಲಬದ್ಧತೆ, ಭೇದಿ, ನರದೌರ್ಬಲ್ಯ, ಮಂಡಿನೋವು, ಕಾಲುಬಾವು ಎಲ್ಲವೂ ಅವರನ್ನು ಕಾಡುತ್ತಿತ್ತು. ಪ್ರಾರಂಭದಿಂದಲೇ ನಿದ್ರಾಹೀನತೆಯಿಂದ ಬಳಲುತ್ತಿದ್ದ ಅವರು ಕೊನೆಯ ದಿನಗಳಲ್ಲಿ, ದಿನದಲ್ಲಿ ಒಂದೆರಡು ಗಂಟೆಗಳ ಕಾಲವೂ ನಿದ್ದೆ ಮಾಡಲಾಗುತ್ತಿರಲಿಲ್ಲ.
ಯಾರಾದರೂ ಮುಟ್ಟಿದರೆ ಮೈಯೆಲ್ಲ ನೋಯುತ್ತಿತ್ತು. `ನನ್ನ ಕೂದಲು-ಗಡ್ಡಗಳೆಲ್ಲ ವಯಸ್ಸಿಗೆ ಮೊದಲೇ ಬೆಳ್ಳಗಾಗಿ ಹೋಗಿದೆ, ಮುಖದ ಚರ್ಮ ಸುಕ್ಕುಗಟ್ಟಿ ನೆರಿಗೆಗಳು ಮೂಡಿವೆ` ಎಂದು ತನ್ನ 34ನೇ ವಯಸ್ಸಿನಲ್ಲಿ ಶಿಷ್ಯೆ ಮೇರಿ ಹೇಲ್‌ಗೆ ಬರೆದ ಪತ್ರದಲ್ಲಿ ಅವರು ಹೇಳಿಕೊಂಡಿದ್ದಾರೆ.
ಅನಾರೋಗ್ಯದಿಂದ ಬೇಸತ್ತು ಹೋಗಿದ್ದ ಅವರು, ಒಂದು ದಿನ `ದಯಾಮರಣದ ಮೂಲಕವಾದರೂ ನನಗೆ ಸಾವು ನೀಡಿ, ರೇಸ್‌ನಲ್ಲಿ ಓಡಲಾಗದ ಕುಂಟು ಕುದುರೆಯಂತಾಗಿದ್ದೇನೆ ನಾನು. ಈ ನೋವು-ಸಂಕಟ ಸಹಿಸಲಾರೆ` ಎಂದು ಹತಾಶೆಯಿಂದ ಹೇಳಿದ್ದನ್ನು ಸೋದರಿ ನಿವೇದಿತಾ ದಾಖಲಿಸಿದ್ದಾರೆ..

ಈ ಎಲ್ಲ ರೋಗಗಳ ನಡುವೆಯೂ ಅವರ ನಾಲಗೆಯ ಚಪಲ ಮಾತ್ರ ಕಡಿಮೆಯಾಗಿರಲಿಲ್ಲ. ಎಲ್ಲ ಬಂಗಾಳಿಗಳಂತೆ ಅವರೊಬ್ಬ ತಿಂಡಿಪೋತರಾಗಿದ್ದರು. `ನಾನು ಠಾಕೂರ್ (ಪರಮಹಂಸ) ಅವರಿಗೆ  ಬಿಸಿನೀರಿನಲ್ಲಿ ಮಸಾಲೆಯ ಜತೆ ಮಾಂಸದ ತುಂಡುಗಳನ್ನು ಹಾಕಿ ಬೇಯಿಸಿ ಪಲ್ಯ ಮಾಡಿಕೊಡುತ್ತಿದ್ದೆ. ಆದರೆ ನರೇನ್ (ವಿವೇಕಾನಂದ) ಮಾತ್ರ ಮಾಂಸದ ಅಡುಗೆಯನ್ನು ಬಗೆಬಗೆಯಲ್ಲಿ ಮಾಡುತ್ತಿದ್ದ` ಎಂದು ಶಾರದಾದೇವಿ ಬರೆದಿದ್ದಾರೆ.
ದೇಶ-ವಿದೇಶಗಳ ಮಾಂಸಾಹಾರಿ ಅಡುಗೆಯನ್ನು ಮಾಡುವ ಅವರ ಪಾಕಪ್ರಾವೀಣ್ಯತೆ ಬಗ್ಗೆ ಸೋದರಿ ನಿವೇದಿತಾ ವಿವರವಾಗಿ ದಾಖಲಿಸಿದ್ದಾರೆ. ಅವರ ಸಾವಿನ ದಿನವೇ ಮಳೆಗಾಲದ ಮೊದಲ ಅತಿಥಿಗಳಾಗಿ `ಹಿಲ್ಸಾ` ಮೀನುಗಳು ಹೂಗ್ಲಿ ನದಿ ಪ್ರವೇಶಿಸಿದ್ದವು. ಅದನ್ನು ತಂದು ಪಲ್ಯಮಾಡಿ ಮಧ್ಯಾಹ್ಮ ಊಟ ಮಾಡಿ ವಿರಮಿಸಿದ್ದ ಅವರು ರಾತ್ರಿ ಕೊನೆಯುಸಿರೆಳೆದಿದ್ದರು.

ಅಕಾಡೆಮಿಕ್ ಮಾನದಂಡಗಳ ಪ್ರಕಾರ ದಡ್ಡರಾಗಿರುವ, ಹತ್ತಾರು ಬಗೆಯ ಕಾಯಿಲೆಗಳಿಂದ ನರಳುತ್ತಿರುವ, ಕುಟುಂಬದ ಕಷ್ಟಗಳಿಂದ ಜರ್ಝರಿತರಾಗಿರುವ, ತಿಂಡಿಪೋತರಾಗಿರುವ ಸಾಮಾನ್ಯ ವ್ಯಕ್ತಿಗಳು ಕೂಡಾ `ವಿವೇಕಾನಂದ`ನಾಗಿ ಬೆಳೆಯಲು ಸಾಧ್ಯ ಎಂಬುದನ್ನು ನರೇಂದ್ರನಾಥ ತನ್ನ ಸಾಧನೆ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಇಷ್ಟೆಲ್ಲ ಕಷ್ಟ-ಕಾಯಿಲೆಗಳ ನಡುವೆಯೂ ಹಿಂದೂ ಧರ್ಮವೂ ಸೇರಿದಂತೆ ಜಗತ್ತಿನ ಎಲ್ಲ ಧರ್ಮಗಳ ಗ್ರಂಥಗಳು ಮತ್ತು ತತ್ವಜ್ಞಾನವನ್ನು ಅವರು ಅಧ್ಯಯನ ಮಾಡಿದ್ದರು. ದೇಶ-ವಿದೇಶಗಳಿಗೆ ಭೇಟಿ ನೀಡಿ ಭಾಷಣ ಮಾಡುತ್ತಿದ್ದರು, ನಿರಂತರವಾಗಿ ಪುಸ್ತಕ ಮತ್ತು ಪತ್ರಗಳನ್ನು ಬರೆಯುತ್ತಿದ್ದರು.
ಸಾವಿರಾರು ಶಿಷ್ಯರನ್ನು, ಕೋಟ್ಯಂತರ ಅನುಯಾಯಿಗಳನ್ನು ಹೊಂದಿದ್ದರು. ತಮ್ಮ ಗುರುವಿನ ಹೆಸರಲ್ಲಿ ಜಗತ್ತಿನಾದ್ಯಂತ ರಾಮಕೃಷ್ಣ ಮಿಷನ್ ಹೆಸರಿನ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದರು.
ಇವೆಲ್ಲವನ್ನು ಅವರು ಮಾಡಿದ್ದು ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ. ಯಃಕಶ್ಚಿತ್ ಮನುಷ್ಯನೊಬ್ಬ ಇಂತಹ ಸಾಧನೆ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ, ಅದಕ್ಕಾಗಿ ಆತ `ವಿವೇಕಾನಂದ` ಆಗಿರಬೇಕು.